ಮಂಗಳೂರು: ಪ್ರತಿಷ್ಠಿತ ʻಪಂಪ ಸದ್ಭಾವನʼ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಮಾಲತಿ ಶೆಟ್ಟಿ ಮಾಣೂರು ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 5ರಂದು ಶನಿವಾರ ಸಂಜೆ 5:00 ಗಂಟೆಗೆ ನಡೆಯಲಿರುವ ʻರಂಗ ಸಂಭ್ರಮ-2025ʼ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಉದ್ಘಾಟಿಸಲಿದ್ದಾರೆ. ಇದೇ ವೇಳೆ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಿದ್ದಾರೆ.
ʻಪಂಪ ಸದ್ಭಾವನʼ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಡಾ.ಮಾಲತಿ ಶೆಟ್ಟಿ ಮಾಣೂರು ಅವರು ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿಯಾಗಿದ್ದಾರೆ. ಇವರು ಕಳೆದ 19 ವರುಷಗಳಿಂದ ಸಾಹಿತ್ಯ, ಪತ್ರಿಕೋದ್ಯಮ, ಸಮಾಜ ಸೇವೆ, ಸಂಘಟನೆಯಲ್ಲಿ, ಸಕ್ರಿಯರಾಗಿದ್ದು ಒಟ್ಟು 9 ಕೃತಿಗಳನ್ನು ಬರೆದಿದ್ದಾರೆ.
ಇತರ ಸಾಹಿತಿಗಳ 42 ಕೃತಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಪತ್ರಿಕೆಯ ವತಿಯಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಇವರ ಅಪೂರ್ವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈಗಾಗಲೇ ಹಲವಾರು ರಾಜ್ಯ, ರಾಷ್ಟ್ರ, ಪ್ರಶಸ್ತಿಗಳು ಪ್ರಾಪ್ತವಾಗಿದೆ.
ನಿವೃತ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿಗಳಾದ ಎನ್. ಸಂತೋಷ ಹೆಗ್ಡೆ ಅವರು ಪ್ರಧಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ. ನಾಗರಾಜ್ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ನಿವೃತ್ತ ಡಿ.ಸಿ. ಡಾ.ಡಿ. ವಿಶ್ವನಾಥ್, ಡಾ. ಲಕ್ಷ್ಮೀದೇವಿ ಬೆಂಗಳೂರು, ವೀರೇಶ್ ಮುತಿನಮಠ, ಕೆಂಚನೂರು ಶಂಕರ್ ಉಪಸ್ಥಿತರಿರುವರು.