ಪುತ್ತೂರು : ರೇಣುಕಾ ಪ್ರಸಾದ್ ಕೊಲೆ ಆರೋಪಿ, ನಟ ಡಿಬಾಸ್ ದರ್ಶನ್ ಕೇರಳದ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ನಡೆಸಿದ ವಿಚಾರದಲ್ಲಿ ಪುತ್ತೂರಿನಲ್ಲೊ ಎರಡು ತಂಡಗಳ ನಡುವೆ ಮಾರಾಮಾರಿ ನಡೆಸಿರುವುದು ಬೆಳಕಿಗೆ ಬಂದಿದೆ. ಜಲೀಲ್ ಕರೋಪಾಡಿ ಕೊಲೆ ಆರೋಪಿ ಪ್ರಜ್ವಲ್ ರೈ ಎಂಬಾತ ನಟ ದರ್ಶನ್ ಜೊತೆ ತೆಗೆಸಿಕೊಂಡ ಫೋಟೋ ವೈರಲ್ ಮಾಡಿದ ವಿಚಾರದಲ್ಲಿ ಈ ಮಾರಾಮಾರಿ ನಡೆದಿದೆ ಎಂದು ಹೇಳಲಾಗಿದೆ. ಮಾರಾಮಾರಿಯಲ್ಲಿ ದೀಕ್ಷಿತ್ ರೈ ಹಾಗೂ ಮತ್ತೋರ್ವ ವ್ಯಕ್ತಿ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ವಾರದ ಹಿಂದೆ ನಟ ದರ್ಶನ್ ಕೇರಳದ ಕರಣಿಕ ಕ್ಷೇತ್ರ, ಮಾಡಾಯಿಕಾವು ದೇವಸ್ಥಾನಕ್ಕೆ ಶತ್ರುಸಂಹಾರ ಪೂಜೆ ನೆರವೇರಿಸಲು ಹೋಗಿದ್ದರು. ದರ್ಶನ್‌ನನ್ನು ಕೇರಳಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದು ಇದೇ ಪ್ರಜ್ವಲ್ ರೈ ಪಾತಾಜೆ ಎನ್ನುವುದು ಕೆಲವು ದಿನಗಳ ಬಳಿಕ ಬಹಿರಂಗಗೊಂಡಿತ್ತು. ದರ್ಶನದ ಬಳಿಕ ಪ್ರಜ್ವಲ್ ರೈ ಪಾತಾಜೆ ಡಿ ಬಾಸ್ ಜೊತೆ ಫೋಟೋ ತೆಗೆಸಿಕೊಂಡಿದ್ದು, ಅದನ್ನು ತನ್ನ ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಇದು ಮಾಧ್ಯಮಗಳಿಗೆ ಸಿಕ್ಕಿದ್ದು, ಈ ಬಗ್ಗೆ ವರದಿಗಳೂ ಪ್ರಸಾರವಾಗಿದ್ದವು. ಫೋಟೋವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದೆ.
ಈ ಫೋಟೋವನ್ನು ದೀಕ್ಷಿತ್ ರೈ ತಂಡ ಮಾಧ್ಯಮಕ್ಕೆ ನೀಡಿದ್ದಾರೆ ಎಂದು ಪ್ರಜ್ವಲ್ ರೈ ಕೋಪಗೊಂಡಿದ್ದು ಇಬ್ಬರ ನಡುವೆ ಮನಸ್ತಾಪ ಬೆಳೆದಿದೆ. ಈ ವಿಚಾರದಲ್ಲಿ ಮಾ.27ರಂದು ಸಂಜೆ ದೀಕ್ಷಿತ್ ರೈ ತಂಡ ಪುತ್ತೂರಿನ ದರ್ಬೆಲ್ಲಿನ ಪ್ರಜ್ವಲ್ ರೈ ಮಾಲಕತ್ವದ ಹೋಟೆಲ್‌ಗೆ ನುಗ್ಗಿ ಗಲಾಟೆ ಮಾಡಿತ್ತು ಎನ್ನಲಾಗಿದೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ತಂಡಕ್ಕೆ ಎಚ್ಚರಿಕೆ ನೀಡಿ ಕಳಿಸಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿ ಅಂದು ಸಂಜೆ ಉಪ್ಪಿನಂಗಡಿಯ ನೆಕ್ಕಿಲಾಡಿ ಬಳಿ ಮತ್ತೆ ಈ ಎರಡು ತಂಡಗಳ ನಡುವೆ ಮಾ*ರಾಮಾರಿ ನಡೆದಿದೆ. ಬದಿಯಡ್ಕದ ಕೆಲ ಯುವಕರು ನೆಕ್ಕಿಲಾಡಿಗೆ ಬಂದು ದೀಕ್ಷಿತ್ ರೈ ಹಾಗೂ ಜೊತೆಗಿದ್ದವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ದೀಕ್ಷಿತ್ ರೈಗೆ ತಲೆಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ದೀಕ್ಷಿತ್ ರೈ ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮತ್ತೋರ್ವ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಪ್ರಕರಣದ ಕುರಿತಂತೆ ವಿಚಾರಣೆ ನಡೆಸುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ದರ್ಶನ್ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ಮತ್ತೆ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಇದೀಗ ಅವರು ಕೇರಳದ ಕಣ್ಣೂರಿನ ಮಡಾಯಿಕಾವು ಭಗವತಿ ದೇವಾಲಯದಲ್ಲಿ ಶತ್ರು ಸಂಹಾರ ಹೋಮ ನಡೆಸಿದ್ದು, ಇದಕ್ಕೆ ನೆರವಾಗಿದ್ದು, ಜಲೀಲ್ ಕೊಲೆ ಪ್ರಕರಣದ ಆರೋಪಿ ಪ್ರಜ್ವಲ್ ರೈ ಎನ್ನುವುದು ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲಕ್ಕೆ ಕಾರಣವಾಗಿತ್ತು. ಇಬ್ಬರು ಕೊಲೆ ಆರೋಪಿಗಳು ಒಟ್ಟಿಗೆ ಹೋಗಿ ಶತ್ರು ಸಂಹಾರಕ್ಕಾಗಿ ಪೂಜೆ ಮಾಡಿಸಿದ್ದಾರೆ ಎಂದು ಕೆಲವರು ವ್ಯಂಗ್ಯವಾಡಿದ್ದರು.
2017ರ ಎಪ್ರಿಲ್ 20ರಂದು ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಜಲೀಲ್ ರನ್ನು ಕರೋಪಾಡಿ ಗ್ರಾಮ ಪಂಚಾಯತ್ ಬಳಿಯೇ ಕೊಲೆ ಮಾಡಲಾಗಿತ್ತು. ಮುಸುಕುಧಾರಿಗಳ ತಂಡವೊಂದು ಗ್ರಾಮ ಪಂಚಾಯತ್‌ಗೆ ನುಗ್ಗಿ ಜಲೀಲ್ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಬಳಿಕ ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳ ರಚನೆ ಮಾಡಿ ಹನ್ನೊಂದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಓರ್ವ ಆರೋಪಿ ಪ್ರಜ್ವಲ್ ರೈ ಎನ್ನುವುದನ್ನು ಪೊಲೀಸರು ಮಾಹಿತಿ ನೀಡಿದ್ದಾರೆ.