ಮಂಗಳೂರು: ಕಾಂಗ್ರೆಸ್ ಒಂದು ಕುಲಗೆಟ್ಟ ಪಕ್ಷ ಎಂದು ಸ್ವತಃ ಡಾ. ಬಿ. ಆರ್ ಅಂಬೇಡ್ಕರ್ ಅವರು ಅವತ್ತೇ ಹೇಳಿದ್ದರು. ಈ ದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನ ಅವಕಾಶ ಮಾಡಿ ಕೊಡುವುದಿಲ್ಲ. ಆದರೆ ಡಿ. ಕೆ ಶಿವಕುಮಾರ್ ಹಾಗೂ ಅವರ ಪಕ್ಷ, ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುವ ಕೆಟ್ಟ ಆಲೋಚನೆ ಮಾಡುತ್ತಿದೆ ಇದು ಖಂಡನೀಯ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
ಅವರು ಇಂದು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ʻಸಂವಿಧಾನ ತಿದ್ದುಪಡಿ ಮಾಡುತ್ತೇವೆʼ ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಮಂಗಳೂರು ಪುರಭವನದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ನಡೆದ ಪ್ರತಿಭಟನೆಯಲ್ಲಿ ಮಾನ್ಯ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಭಾಗವಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಮೊದಲಿಗೆ ಡಾ ಅಂಬೇಡ್ಕರ್ ಪ್ರತಿಮೆಗೆ ಹೂ ಮಾಲೆ ಹಾಕಿದರು. ಪ್ರತಿಭಟನೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ, ಬಿಜೆಪಿ ದಕ ಅಧ್ಯಕ್ಷ ಸತೀಶ್ ಕುಂಪಲ, ಮತ್ತಿತರ ಮುಖಂಡರು ಇದ್ದರು.