ಸುರತ್ಕಲ್: ಸಮುದ್ರ ವೀಕ್ಷಣೆಗೆ ಬಂದು ಈಜಾಡಲು ಸಮುದ್ರಕ್ಕೆ ಇಳಿದಿದ್ದ ನಾಲ್ವರು ಯುವಕರ ಪೈಕಿ ಮೂವರು ನೀರುಪಾಲಾದ ಘಟನೆ ಬುಧವಾರ ಸಂಜೆ ಇಲ್ಲಿನ ಕುಳಾಯಿ ಜೆಟ್ಟಿ ಬಳಿ ನಡೆದಿದೆ. ಈಜಲು ಬಾರದೆ ಸಮುದ್ರದಲ್ಲಿ ಸಿಲುಕಿದ್ದ ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಶಿವಲಿಂಗಪ್ಪ ಎಂಬವರ ಪುತ್ರ ಮಂಜುನಾಥ್ ಎಸ್ (31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್, ಬೆಂಗಳೂರು ಜೆ.ಪಿ. ನಗರ ನಿವಾಸಿ ಸತ್ಯವೇಲು (30) ಹಾಗೂ ಬೀದರ್ ಜಿಲ್ಲೆ ಹಂಗಾರಗಾ ನಿವಾಸಿ ವಿಶ್ವಂಬರ್ ಎಂಬವರ ಮಗ ಪರಮೇಶ್ವರ್ (30) ಎಂಬವರು ಬೀಚ್ ಗೆ ತಿರುಗಾಡಲು ಬಂದಿದ್ದು ಸಮುದ್ರದಲ್ಲಿ ಈಜಾಟಕ್ಕೆ ಇಳಿದ ವೇಳೆ ದುರ್ಘಟನೆ ಸಂಭವಿಸಿದೆ. ನಾಲ್ವರು ನೀರಲ್ಲಿ ಮುಳುಗುತ್ತಿದ್ದ ವೇಳೆ ಸ್ಥಳೀಯ ಮೀನುಗಾರರು ಬೀದರ್ ಜಿಲ್ಲೆ ಹಂಗಾರಗಾ ನಿವಾಸಿ ವಿಶ್ವಂಬರ್ ಎಂಬವರ ಮಗ ಪರಮೇಶ್ವರ್ (30) ಎಂಬವರನ್ನು ರಕ್ಷಿಸಿದ್ದಾರೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.