ಓಮನ್: ಬದುಕು ಕಟ್ಟಿಕೊಳ್ಳಲು ಓಮನ್ ಮರುಭೂಮಿಯ ನಾಡಿಗೆ ಹೋದ ಉಡುಪಿ ಜಿಲ್ಲೆಯ ಕಾಪುವಿನ ಯುವಕನೊಬ್ಬ ವಿಧಿಯ ಆಟಕ್ಕೆ ಬಲಿಯಾಗಿದ್ದಾನೆ. ಓಮನ್‌ನ ಲಿವಾ ವಿಲಾಯತ್ ಎಂಬಲ್ಲಿ ಫೆಬ್ರವರಿ 8ರ ಮುಂಜಾನೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಉಚ್ಚಿಲ ಕಲತ್ತೂರಿನ ಯುವಕ ಚೇತನ್ (26) ದುರ್ಮರಣಕ್ಕೀಡಾಗಿದ್ದಾರೆ.

ಅಪಘಾತದಲ್ಲಿ ಚೇತನ್ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದು, ಉಳಿದ ಮೂವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಧೃಡಪಡಿಸಿದ್ದಾರೆ. ಮನೆಯವರ ಕನಸು ನನಸು ಮಾಡಲು ಪರದೇಶಕ್ಕೆ ಹೋಗಿದ್ದ ಚೇತನ್, ಈಗ ಶವವಾಗಿ ಮರಳುತ್ತಿರುವುದು ಇಡೀ ಉಚ್ಚಿಲ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.
