ಮಂಗಳೂರು: ಕನ್ನಡ ಚಿತ್ರರಂಗ ಅಂದ್ರೆ ಈಗ ಬರೀ ಮಾಸ್ ಮಸಾಲೆ ಸಿನಿಮಾಗಳ ಅಂಗಳವಲ್ಲ. ಮಣ್ಣಿನ ವಾಸನೆ ಬಡಿಯುವ, ನಮ್ಮದೇ ಬದುಕಿನ ನಂಬಿಕೆಗಳನ್ನು ತೆರೆದಿಡುವ ಸಿನಿಮಾಗಳಿಗೆ ಈಗ ಕಾಲ ಬಂದಿದೆ. ಈ ಸಾಲಿಗೆ ಈಗ ಸೇರ್ಪಡೆಯಾಗುತ್ತಿರೋ ಹೊಸ ಹೆಸರು ʻಮಾರ್ನಮಿ’. ಈ ಚಿತ್ರ ಫೆಬ್ರವರಿ 20ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿದೆ ಎಂದು ನಿರ್ದೇಶಕ ರಿಷಿತ್ ಶೆಟ್ಟಿ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರಿಷಿತ್ ಶೆಟ್ಟಿ ಮಾತನಾಡಿ, ಕರಾವಳಿ ಅಂದ್ರೆ ಅಲ್ಲಿನ ಹುಲಿವೇಷದ ಕುಣಿತಕ್ಕೆ ಒಂದು ಗತ್ತು, ಒಂದು ಗಾಂಭೀರ್ಯವಿದೆ. ಆ ಸಾಂಸ್ಕೃತಿಕ ಹಿನ್ನೆಲೆಯನ್ನು ಇಟ್ಟುಕೊಂಡು ʻಮಾರ್ನಮಿ’ ಕಥೆಯನ್ನು ಹೆಣೆಯಲಾಗಿದೆ. ಶಿಲ್ಪಾ ನಿಶಾಂತ್ ಅವರು ʻಗುಣಾದ್ಯ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು, ನಿಶಾಂತ್ ಎನ್ನೆನ್ ಅವರು ಪ್ರಸ್ತುತಪಡಿಸಿದ್ದಾರೆ ಎಂದರು.

ತಾರಾಗಣದ ತೂಕ:
ಇಲ್ಲಿ ರಿತ್ವಿಕ್ ಮಠದ್ ಮತ್ತು ಚೈತ್ರಾ ಜೆ ಆಚಾರ್ ಅವರಂತಹ ಪ್ರತಿಭಾವಂತರಿದ್ದಾರೆ. ಜೊತೆಗೆ ಅನುಭವಿ ನಟ ಸುಮನ್ ತಲ್ವಾರ್, ಸೋನು ಗೌಡ ಮತ್ತು ಕರಾವಳಿಯ ಮಣ್ಣಿನ ಪ್ರತಿಭೆಗಳಾದ ಪ್ರಕಾಶ್ ತುಮಿನಾಡು, ಜ್ಯೋತಿಷ್ ಶೆಟ್ಟಿ, ಸ್ವರಾಜ್ ಶೆಟ್ಟಿ ಅವರ ದೊಡ್ಡ ಪಡೆಯೇ ಇದೆ. ಚರಣ್ ರಾಜ್ ಅವರ ಸಂಗೀತವಿದೆ. ಶಿವಸೇನಾ ಅವರ ಕ್ಯಾಮರಾ ಕಣ್ಣುಗಳು ಕಡಲ ತಡಿಯ ಸೊಬಗನ್ನು ಸೆರೆ ಹಿಡಿದಿವೆ.

ಅರ್ಜುನ್ ರಾಜ್ ಅವರ ಆಕ್ಷನ್ ದೃಶ್ಯಗಳು ಮತ್ತು ವರದರಾಜ್ ಕಾಮತ್ ಅವರ ಕಲಾ ನಿರ್ದೇಶನ ಚಿತ್ರಕ್ಕೆ ಜೀವ ತುಂಬಿವೆ. ಪ್ರಥೀಕ್ ಶೆಟ್ಟಿ ಅವರ ಸಂಕಲನದಲ್ಲಿ ಮೂಡಿಬಂದಿರುವ ʻಮಾರ್ನಮಿ’, ಕರಾವಳಿಯ ಕಥೆಯನ್ನು ಕನ್ನಡಿಗರ ಹೃದಯಕ್ಕೆ ತಲುಪಿಸುವುದರಲ್ಲಿ ಅನುಮಾನವೇ ಇಲ್ಲ ನೋಡಿ, ಇಂತಹ ಸಿನಿಮಾಗಳು ಬಂದಾಗ ನಾವು ಬೆನ್ನು ತಟ್ಟಬೇಕು. ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ಪ್ರಯತ್ನಗಳಿಗೆ ನಿಮ್ಮ ಬೆಂಬಲವಿರಲಿ ಎಂದು ರಿಷಿತ್ ಶೆಟ್ಟಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಷ್ ಶೆಟ್ಟಿ, ಸ್ವರಾಜ್ ಶೆಟ್ಟಿ ಮತ್ತಿತರರಿದ್ದರು.
