
ನವದೆಹಲಿ: 18 ವರ್ಷದ ಯುವಕನೋರ್ವ ತನ್ನ ಬಳಿಯಿದ್ದ ಪಿಸ್ತೂಲನ್ನು ತೋರಿಸುವ ಭರದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿದ ಪರಿಣಾಮ ಆತನ ತಾಯಿ ಮೃತಪಟ್ಟ ಘಟನೆ ಸೋಮವಾರ(ಫೆ.10) ರಾತ್ರಿ ದೆಹಲಿಯ ಜಂಗ್ ಪುರ ಸಮೀಪದ ಪಂತ್ ನಗರದ ವಾಲ್ಮೀಕಿ ಮಂದಿರ ಜೆಜೆ ಕ್ಲಸ್ಟರ್ ನಲ್ಲಿ ವರದಿಯಾಗಿದೆ.

ಸುಮತಿ (37) ಮೃತ ಯುವತಿ.
ಯುವಕ ಆಶ್ರಮ ಎಂಬ ಪ್ರದೇಶದ ವ್ಯಕ್ತಿಯೊಬ್ಬನಿಂದ ಅಕ್ರಮವಾಗಿ ನಾಡಪಿಸ್ತೂಲನ್ನು ಖರೀದಿಸಿದ್ದನು. ಆ ಪಿಸ್ತೂಲನ್ನು ತನ್ನ ತಾಯಿಗೆ ತೋರಿಸುತ್ತಿದ್ದಾಗ, ಅದು ಅನಿರೀಕ್ಷಿತವಾಗಿ ಸಿಡಿದು ಗುಂಡು ನೇರವಾಗಿ ತಾಯಿಯ ಮುಖಕ್ಕೆ ತಗುಲಿದೆ. ತಕ್ಷಣವೇ ಅವರನ್ನು ಮೂಲಚಂದ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನಾ ಸಂಬಂಧ ಲಾಜಪತ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 18 ವರ್ಷದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಯಿಯನ್ನು ಕೊಂದ ನಂತರ ಯುವಕನು ಪಿಸ್ತೂಲನ್ನು ಸಮೀಪದ ಚರಂಡಿಯಲ್ಲಿ ಎಸೆದಿದ್ದನು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯುವಕನಿಗೆ ಈ ಅಕ್ರಮ ಪಿಸ್ತೂಲನ್ನು ಪೂರೈಸಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.