ತೋಕೂರು ಬೆಳ್ಳಾಯರು ಪರಿಸರದಲ್ಲಿ ನಿತ್ಯ ವಾಮಾಚಾರ! ಪೊಲೀಸ್ ಬೀಟ್ ಗೆ ನಾಗರಿಕರ ಒತ್ತಾಯ!


ಮೂಲ್ಕಿ
: ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು, ಕೆರೆಕಾಡು, ಬೆಳ್ಳಾಯರು, ಟಿಎ ಬೋರ್ಡ್ ರಸ್ತೆಯಲ್ಲಿ ಪ್ರತೀ ನಿತ್ಯ ಎಂಬಂತೆ ವಾಮಾಚಾರ ನಡೆಸಲಾಗುತ್ತಿದ್ದು ನಾಗರಿಕರು ಭಯಭೀತರಾಗಿದ್ದಾರೆ. ಮೂಲ್ಕಿ ಪೊಲೀಸರು ರಾತ್ರಿ ವೇಳೆ ಬೀಟ್ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ತೋಕೂರು ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಯಾವಾಗ ನೋಡಿದರೂ ತೆಂಗಿನಕಾಯಿ, ಕುಂಬಳಕಾಯಿ ಒಡೆಯಲಾಗುತ್ತಿದ್ದು ಕೋಳಿ ಬಲಿಯನ್ನು ಕೂಡ ರಾಜಾರೋಷವಾಗಿ ನಡೆಸಲಾಗುತ್ತಿದೆ. ರಾತ್ರಿ 10 ಗಂಟೆಯ ನಂತರ ವಾಮಾಚಾರ ಮಾಡುವವರು ಇಲ್ಲಿಂದ ಕೆರೆಕಾಡು ರಸ್ತೆ, ಬೆಳ್ಳಾಯರು ಪರಿಸರ, ಟಿಎ ಬೋರ್ಡ್ ರಸ್ತೆ ಎಲ್ಲೆಂದರಲ್ಲಿ ಕೋಳಿ ಕಡಿದು ತೆಂಗಿನಕಾಯಿ ಒಡೆದು ವಾಮಾಚಾರ ಪ್ರಯೋಗ ಮಾಡುತ್ತಿದ್ದಾರೆ.
ಹುಣ್ಣಿಮೆ, ಅಮಾವಾಸ್ಯೆ ರಾತ್ರಿ ಈ ರಸ್ತೆಯಲ್ಲಿ ಸಂಚರಿಸಲು ಜನ ಭಯ ಪಡುವಂತಾಗಿದೆ. ಕೆಲಸಮಯದ ಹಿಂದೆ ಇದೇ ರಸ್ತೆಯಲ್ಲಿನ ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದು ಇದೇ ತಂಡದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸ್ಕೂಟರ್, ಬೈಕ್, ಆಲ್ಟೊ ಕಾರ್ ಪರಿಸರದಲ್ಲಿ ರಾತ್ರಿ ವೇಳೆ ಶಂಕಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶಂಕಾಸ್ಪದ ವಾಹನಗಳ ನಂಬರ್ ಸಂಗ್ರಹಿಸಿದ್ದು ಪೊಲೀಸ್ ಇಲಾಖೆ ರಾತ್ರಿ ವೇಳೆ ಗಸ್ತು ಹೆಚ್ಚಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.
ತೋಕೂರು-ಕೆರೆಕಾಡು ರಸ್ತೆಯಲ್ಲಿ ಮನೆಗಳು ಕಡಿಮೆಯಿದ್ದು ರಾತ್ರಿ ವೇಳೆ ಕಳ್ಳರು, ವಾಮಾಚಾರಿಗಳಿಗೆ ವರದಾನವಾಗಿ ಪರಿಣಮಿಸಿದೆ. ಹಳೆಯಂಗಡಿ, ಇಂದಿರಾನಗರ, ಕೆರೆಕಾಡು ಮೂಲದ ವ್ಯಕ್ತಿಗಳು ಇಲ್ಲಿ ಕಳ್ಳತನ ಅಥವಾ ವಾಮಾಚಾರದ ಉದ್ದೇಶದಿಂದ ಹಗಲು ಮತ್ತು ರಾತ್ರಿ ವೇಳೆ ಓಡಾಟ ನಡೆಸುತ್ತಿದ್ದು ಪೊಲೀಸರು ಅಹಿತಕರ ಘಟನೆಗಳು ನಡೆಯುವ ಮುನ್ನ ಗಮನ ಹರಿಸಬೇಕಿದೆ.

error: Content is protected !!