ಸುರತ್ಕಲ್: “ನಾನು ಜೆಡಿಎಸ್ ನಲ್ಲೇ ಇದ್ದೇನೆ ಬಿಜೆಪಿಗೆ ಬೆಂಬಲವನ್ನೂ ಕೊಡ್ತೇನೆ, ಆದ್ರೆ ಅವರು ಅದು ಜಾರಿ ತರ್ತೇನೆ ಇದು ಜಾರಿ ಮಾಡ್ತೇನೆ ಅಂದ್ರೆ ನನ್ನ ಬೆಂಬಲವಿಲ್ಲ. ಪಕ್ಷೇತರನಾಗಿ ನಿಲ್ಲಲು ನನ್ನ ಬೆಂಬಲಿಗರು ಒತ್ತಾಯ ಮಾಡ್ತಾ ಇದ್ದಾರೆ. ಆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಗುರುವಾರ ಅಭಿಮಾನಿಗಳ ಸಭೆ ಕರೆಯಲಾಗಿದೆ” ಎಂದು ಮಾಜಿ ಶಾಸಕ ಮೊಯಿದೀನ್ ಬಾವಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮೊಯಿದೀನ್ ಬಾವಾ ಅಭಿಮಾನಿಗಳ ಸಂಘದ ಪರವಾಗಿ ಉಮೇಶ್ ದಂಡೆಕೇರಿ ಮಾತಾಡಿ, “ಮಾಜಿ ಶಾಸಕ ಮೊಯಿದೀನ್ ಬಾವಾ ಕೈಯಲ್ಲಿ ಅಧಿಕಾರ ಇಲ್ಲದೆ ಇದ್ದರೂ ಮೊನ್ನೆ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾಗಿ ಮೃತಪಟ್ಟ ಸಂದರ್ಭದಲ್ಲಿ ಪೋಷಕರಿಗೆ ಪರಿಹಾರದ ಚೆಕ್ ಅನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ” ಎಂದರು.
“ನನ್ನ ಕ್ಷೇತ್ರದ ನಾಲ್ವರು ಮಕ್ಕಳು ನೀರುಪಾಲಾಗಿ ಮೃತಪಟ್ಟ ಸಂದರ್ಭದಲ್ಲಿ ರಾತ್ರಿಯೇ ಆಸ್ಪತ್ರೆಗೆ ಧಾವಿಸಿ ಪೋಷಕರಿಗೆ ಮೃತದೇಹವನ್ನು ಹಸ್ತಾಂತರ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮಕ್ಕಳ ಹೆತ್ತವರು ಬಡವರಾಗಿದ್ದು ಕಳೆದ 29 ತಾರೀಖಿಗೆ ಅವರಿಗೆ ಪರಿಹಾರ ಕೊಡಿಸುವಲ್ಲಿ ಆರ್ಜಿ ಸಲ್ಲಿಸಿದ್ದೇನೆ. ಆದರೆ ಕ್ಷೇತ್ರದ ಶಾಸಕರು ಕನಿಷ್ಟ ಮೃತಪಟ್ಟ ಮಕ್ಕಳ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವನ ನೀಡುವ ಕೆಲಸವನ್ನೂ ಮಾಡಿಲ್ಲ. ಈ ಕುರಿತು ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳಿಗೆ ಮನವಿಯನ್ನು ಮಾಡಿ ಬೆಂಗಳೂರಿಗೆ ಅರ್ಜಿಯನ್ನು ಸ್ವತಃ ತೆಗೆದುಕೊಂಡು ಹೋಗಿ ಇಡೀ ದಿನ ಅಲ್ಲೇ ಕುಳಿತುಕೊಂಡು ಸಿಎಂ ಸಿದ್ದರಾಮಯ್ಯ ಮೂಲಕ ತಲಾ 2 ಲಕ್ಷ ರೂ. ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ” ಎಂದರು.
ವೇದಿಕೆಯಲ್ಲಿ ಕೇಶವ ಸನಿಲ್, ರೋಹಿತ್ ಜೆ ಬೈಲೂರು, ಹ್ಯಾರಿಸ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.