ಶಿಬರೂರು ಕ್ಷೇತ್ರದಲ್ಲಿನ ಬ್ರಹ್ಮ ಕುಂಭಾಭಿಷೇಕದ ಯಶಸ್ವಿಗೆ ಭಕ್ತರೆಲ್ಲರೂ ಕೈಜೋಡಿಸಬೇಕು-ಕೋಂಜಾಲಗುತ್ತು ಪ್ರಭಾಕರ್ ಎಸ್. ಶೆಟ್ಟಿ


ಮುಂಬಯಿ: ಮಂಗಳೂರು ದೇಲಂತ ಬೆಟ್ಟು ,ಶಿಬರೂರು( ತಿಬಾರ್) ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಕಾರ್ಯಗಳು ಜರಗಿದ್ದು ಎ.22 ರಿಂದ ಎ.30 ರ ವರೆಗೆ ಶ್ರೀ ಉಳ್ಳಾಯ, ಶ್ರೀಕೊಡಮಣಿತ್ತಾಯ,
ಮತ್ತು ಪರಿವಾರದೈವಗಳಿಗೆ ಬ್ರಹ್ಮ ಕುಂಭಾಭಿಷೇಕ ಹಾಗೂ ಅಷ್ಟಪವಿತ್ರ ನಾಗಮಂಡಲ ಸೇವೆ ಮತ್ತು ವಿಶೇಷ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗಲಿದೆ.ಆ ನಿಮಿತ್ತ ಸಮಾಲೋಚನ ಸಭೆ ಹಾಗೂ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಚೆಂಬೂರು ರೈಲ್ವೆ ನಿಲ್ದಾಣದ ಎದುರುಗಡೆಯ ವೈಶಾಲಿ ಗಾರ್ಡನ್ ನಲ್ಲಿ ಮಾ.17 ರವಿವಾರ ಬೆಳಿಗ್ಗೆ ಜರಗಿತು. ಶಿಬರೂರು ಗುತ್ತು ಉಷಾ ಶೆಟ್ಟಿಯವರು ದೀಪವನ್ನು ಪ್ರಜ್ವಲಿಸಿ ಸಭೆಗೆ ಚಾಲನೆಯನ್ನು ನೀಡಿದರು.

ಅಧ್ಯಕ್ಷತೆಯನ್ನು ವಹಿಸಿ ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ಇದರ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಕೋಂಜಾಲಗುತ್ತು ಪ್ರಭಾಕರ್ ಎಸ್. ಶೆಟ್ಟಿಯವರು ಮಾತನಾಡಿ ತುಳುನಾಡಿನಲ್ಲಿ ದೈವ ಶಕ್ತಿಯ ಆರಾಧನೆ ವಿಶೇಷವಾಗಿ ನಡೆಯುತ್ತಿದೆ. ತುಳುವರಿಗೆ ದೈವವೇ ಪ್ರಧಾನ. ಬಹಳ ಶ್ರದ್ಧಾ- ಭಕ್ತಿಯಿಂದ ನಾಡಿನ ಜನರು ದೈವಗಳನ್ನು ನಂಬಿ ಆರಾಧಿಸಿ ಕೊಂಡು ಬರುತ್ತಿದ್ದಾರೆ. ದೈವಾನುಗ್ರಹದಿಂದ ತುಳುನಾಡಿನ ಜನರು ದೇಶ ವಿದೇಶದ ಯಾವ ಮೂಲೆಗೂ ಹೋದರೂ ಯಶಸ್ವಿ ಜೀವನ ನಡೆಸುತ್ತಿದ್ದಾರೆ.ಪಾನ್ ,ಚಹಾ ಮಾರುವವರು, ಹೋಟೆಲಿಗರು ಅಲ್ಲದೆ ಚಿಕ್ಕಪುಟ್ಟ ಉದ್ಯಮಿಗಳು , ಉದ್ಯೋಗಿಗಳು ಮುಂಬಯಿ ಮಹಾನಗರದಲ್ಲಿ ದೈವಾನುಗ್ರಹ ದೊಂದಿಗೆ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯ ದುಡಿಮೆಯಿಂದ ಪ್ರಸಿದ್ಧಿಯನ್ನು ಪಡೆದಿದ್ದಾರೆ. ವಿವಿಧ ಕ್ಷೇತ್ರದಲ್ಲಿ ವಿಶೇಷವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ತುಳುವರ ಭಕ್ತಿಗೆ ವಿಶೇಷ ಶಕ್ತಿ ಇದೆ.ತಮ್ಮ ಇಷ್ಟಾರ್ಥಗಳನ್ನು ದೈವ ದೇವರು ಕೂಡಾ ಶೀಘ್ರವಾಗಿ ಈಡೇರಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಊರಿನ ದೈವಸ್ಥಾನ, ದೇವಸ್ಥಾನಗಳು ಭಕ್ತರ ಸಹಕಾರದಿಂದ ಅಭಿವೃದ್ಧಿಗೊಳ್ಳುತ್ತಿದೆ. ಯಾವುದೇ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ಇಲ್ಲವೇ ಜೀರ್ಣೋದ್ಧಾರಕ್ಕೆ ಎಲ್ಲಾ ಭಕ್ತರು ಜೊತೆಗೂಡಿದರೆ ಅದು ಖಂಡಿತಾ ಯಶಸ್ಸನ್ನು ಪಡೆಯುತ್ತದೆ. ಕಾರ್ಣಿಕ ಕ್ಷೇತ್ರವಾದ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮ ಕುಂಭಾಭಿಷೇಕ ಹಾಗೂ ಅಷ್ಟ ಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವ ಜರಗಲಿದೆ. ಇದಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೈವಭಕ್ತರು ತಮ್ಮ ಶಕ್ತ್ಯಾನುಸಾರ ದೇಣಿಗೆಯನ್ನು ನೀಡಿ ಬ್ರಹ್ಮ ಕುಂಭಾಭಿಷೇಕದ ಯಶಸ್ಸಿಗೆ ಕೈಜೋಡಿಸಬೇಕೆಂದರು.


ಈ ಸಂದರ್ಭದಲ್ಲಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಕೋಂಜಾಲಗುತ್ತು ಪ್ರಭಾಕರ್ ಎಸ್ ಶೆಟ್ಟಿ ಮತ್ತು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಹಾಗೂ ಅತಿಥಿ ಗಣ್ಯರು ಬಿಡುಗಡೆಗೊಳಿಸಿದರು.
ಸೂರ್ಯಕಾಂತ್ ಜೆ. ಸುವರ್ಣರವರು ಮಾತನಾಡಿ‌ ನಮಗೆ ಯಾವುದೇ ಕಷ್ಟ ಸಮಸ್ಯೆಗಳು ಬಂದಾಗ ನಾವು ಮೊದಲಾಗಿ ದೈವ ದೇವರನ್ನು ಸ್ಮರಿಸುತ್ತೇವೆ. ನಮಗೆ ದೈವ ದೇವರು ಅನುಗ್ರಹಿಸಿ ಒಳ್ಳೆಯ ದಾರಿಯನ್ನು ತೋರಿಸಿ ಕಷ್ಟಗಳನ್ನು ಪರಿಹರಿಸುತ್ತಾರೆ. ಕೋಲ, ನೇಮ, ಜಾತ್ರೆ, ಬ್ರಹ್ಮಕಲಶೋತ್ಸವ ಇವೆಲ್ಲವೂ ಎಲ್ಲಾ ಸಮಾಜವನ್ನು ಒಗ್ಗೂಡಿಸುವ ದೊಡ್ಡ ಉತ್ಸವ. ಇಂತಹ ಉತ್ಸವದ ಯಶಸ್ಸಿಗೆ ಭಕ್ತರಾದ ನಾವೆಲ್ಲರೂ ಒಟ್ಟಾಗಿ ಶ್ರದ್ಧಾಭಕ್ತಿಯಿಂದ ಸಹಕರಿಸಬೇಕು ಎಂದರು.


ಥಾಣೆಯ ಮಾಜಿ ಮೇಯರ್ ಮಹಾರಾಷ್ಟ್ರ ನಮ್ಮ ಕರ್ಮಭೂಮಿ ಆದರೂ ನಾವೆಲ್ಲಾ ಇಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ನಂಬಿಕೆಯನ್ನು ಕಾಪಾಡಿಕೊಂಡು ಬಂದಿದ್ದೇವೆ.
ದೈವಭಕ್ತರಾದ ನಾವೆಲ್ಲ ಊರಿನ ದೈವಸ್ಥಾನ, ದೇವಸ್ಥಾನಗಳ ಅಭಿವೃದ್ಧಿಗೆ ಸಹಕರಿಸಿ ಜಾತ್ರೆ ಉತ್ಸವದಲ್ಲಿಯೂ ಭಾಗವಹಿಸುತ್ತಿದ್ದೇವೆ. ದೇಶದ ಇತರ ಕಡೆಗಳಿಗಿಂತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳು ತುಂಬಾ ಪಾವಿತ್ರ್ಯತೆಯನ್ನು ಹೊಂದಿದೆ.ಈ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಹಕರಿಸುವುದು ಭಕ್ತರಾದ ನಮ್ಮೆಲ್ಲರ ಕರ್ತವ್ಯ. ದೈವದೇವರ ಸೇವೆಯಿಂದ ಖಂಡಿತ ನಮಗೆ ಅನುಗ್ರಹ ಪ್ರಾಪ್ತಿಯಾಗುತ್ತದೆ. ಧಾರ್ಮಿಕ ದೊಂದಿಗೆ ಸಮಾಜ ಸೇವೆಯನ್ನು ಕೂಡ ನಾವು ಮಾಡೋಣ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಸಿಂಧೆ ಅವರು ಕೂಡ ನಮ್ಮ ಸಂಸ್ಕೃತಿ, ಆರಾಧನಾ ಪದ್ಧತಿಯನ್ನು ತುಂಬಾ ಮೆಚ್ಚಿಕೊಂಡವರು. ಅವರು ನಮ್ಮೂರ ಜನರ ಮೇಲೆ ತುಂಬಾ ಪ್ರೀತಿ, ಗೌರವವನ್ನು ಕೂಡಾ ತೋರುತ್ತಿದ್ದಾರೆ. ಹೋಟೆಲ್ ಉದ್ಯಮಗಳ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತಿದ್ದಾರೆ ಎಂದರು. ಶಿಬರೂರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರು ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು ಮಾತನಾಡಿ
ಮುಂಬರುವ ಎಪ್ರಿಲ್ 26ರಂದು ಶಿಬರೂರು ಬ್ರಹ್ಮಕುಂಭಾಭಿಷೇಕ, ನಾಗಮಂಡಲೋತ್ಸವ ಹಾಗೂ ಪ್ರಜಾಪ್ರಭುತ್ವದ ಉತ್ಸವವಿದೆ. ಚುನಾವಣೆಯಂದೇ ಶಿಬರೂರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಕ್ಷೇತ್ರದ ಶಕ್ತಿಗಳ
ಅನುಗ್ರಹದಿಂದ ಯಾವುದೇ ಅಡೆತಡೆ ಇಲ್ಲದೆ ನಮ್ಮ ಉತ್ಸವ ಯಶಸ್ವಿಯಾಗಿ ಜರಗಲಿದೆ ಎಂಬ ಆಶಯ ನಮ್ಮದಾಗಿದೆ. ಮುಂಬಯಿ ಭಕ್ತರ ಹೆಚ್ಚಿನ ಆರ್ಥಿಕ ನೆರವಿನಿಂದ ತುಳುನಾಡಿನಾದ್ಯಂತ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಾ ಬಂದಿದೆ. ಪ್ರಸ್ತುತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹು ಪ್ರಸಿದ್ಧಿಯನ್ನು ಪಡೆದ ಕಾರಣಿಕ ಶಿಬರೂರು ಕ್ಷೇತ್ರದಲ್ಲಿ 9 ಕೋಟಿಗೂ ಹೆಚ್ಚಿನ ಖರ್ಚು ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಅಲ್ಲದೆ ಬ್ರಹ್ಮ ಕುಂಭಾಭಿಷೇಕ ನಡೆಯಲಿದೆ. ಚಿನ್ನದ ಪಲ್ಲಕ್ಕಿ ಕೂಡ ಶ್ರೀ ಕೊಡಮಣಿತ್ತಾಯ ದೈವಕ್ಕೆ ಅರ್ಪಣೆಯಾಗಲಿದೆ. ಇವೆಲ್ಲ ಧರ್ಮ ಕಾರ್ಯಕ್ಕೆ ಮುಂಬಯಿ ಭಕ್ತರೆಲ್ಲರೂ ಸಹಕರಿಸಬೇಕೆಂದರು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಪ್ರದ್ಯುಮ್ನ ರಾವ್ ಕೈಯೂರಗುತ್ತು ಹಾಗೂ ಮೊಕ್ತೇಸರರು, ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಎಮ್. ಮಧುಕರ್ ಅಮೀನ್ ರವರು ಶಿಬರೂರು ಕ್ಷೇತ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಕಾಮಗಾರಿಗಳ ಖರ್ಚು ವೆಚ್ಚಗಳ ವಿವರವನ್ನು ನೀಡಿದರು.ಶ್ಯಾಮಲಾ ಪ್ರಭಾಕರ್ ಶೆಟ್ಟಿ ಶಿಬರೂರು ಗುತ್ತು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪರ್ಲ ಬೈಲುಗುತ್ತು ತುಕಾರಾಮ ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ,ಕುರ್ತಿಮಾರ್ ಗುತ್ತು ಭಾಸ್ಕರ್ ಶೆಟ್ಟಿ ಕಾಶಿಮಮೀರಾ, ಶಿಬರೂರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿಯ ಸಂಚಾಲಕರು, ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಪರಿಷತ್ ನ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಆಹಾರ್ ನ ಗೌರವ ಕಾರ್ಯದರ್ಶಿ ಸುಧಾಕರ್ ಆರ್. ಶೆಟ್ಟಿ, ಪೊವಾಯಿ, ಶ್ರೀ ಮಹಾಶೇಷ ರುಂಡ ಮಾಲಿನಿ ದೇವಸ್ಥಾನದ ಜಗದೀಶ್ ಸುವರ್ಣ,ಥಾಣೆಯ ಮಾಜಿ ಮೇಯರ್ ಮೀನಾಕ್ಷಿ ಸಿಂಧೆ, ಬೊಂಬೆ ಹೈಕೋರ್ಟ್ ನ್ಯಾಯವಾದಿ ಮಹೇಶ್ ಎನ್ .ಕೋಟ್ಯಾನ್ ಇವರನ್ನು ಶಾಲು ಹೊದಿಸಿ ಹೂ ಗುಚ್ಚವನ್ನು ನೀಡಿ ಕೋಂಜಾಲ ಗುತ್ತು ಪ್ರಭಾಕರ್ ಎಸ್. ಶೆಟ್ಟಿಯವರು ಗೌರವಿಸಿದರು. ವೇದಿಕೆಯಲ್ಲಿ ಶಿಬರೂರು ಗುತ್ತು ಕಿಶೋರ್ ಶೆಟ್ಟಿ, ಶಿಬರೂರು ಗುತ್ತು ಶೈಲೇಶ್ ಶೆಟ್ಟಿ, ಶಿ‌ಬರೂರು ಮೂಡುಮನೆ ಯಾದವ ಕೃಷ್ಣ ಶೆಟ್ಟಿ, ಶಿಬರೂರು ಅಡುಮನೆ ಶಂಕರ್ ಶೆಟ್ಟಿ, ಶಿಬರೂರು ಗುತ್ತು ದಾಮೋದರ್ ಶೆಟ್ಟಿ ಉಪಸ್ಥಿತರಿದ್ದರು.
ಶಿಬರೂರು ಅಡುಮನೆ ಸುರೇಶ್ ಎಲ್. ಶೆಟ್ಟಿ ಪ್ರಾರ್ಥನೆಗೈದರು.ಕೋರ್ಯಾರು ಹೊಸಮನೆ ವಿಜೇಶ್ ಶೆಟ್ಟಿ ಕಾರ್ಯಕ್ರಮವನ್ನು .ಶಿಬರೂರುಗುತ್ತು ಸುರೇಶ್ ಎಸ್.ಶೆಟ್ಟಿ ಸಹಕರಿಸಿದರು. ಅಪಾರ ಸಂಖ್ಯೆಯಲ್ಲಿ ದೈವಭಕ್ತರು ಉಪಸ್ಥಿತರಿದ್ದರು.

error: Content is protected !!