“ಉಪರಾಷ್ಟ್ರಪತಿಯನ್ನು ಅಪಮಾನಿಸಿರುವುದು ಕಾಂಗ್ರೆಸ್ ನೀಚ ಪ್ರವೃತ್ತಿಯನ್ನು ತೋರಿಸುತ್ತದೆ” -ಡಾ.ವೈ ಭರತ್ ಶೆಟ್ಟಿ

ಜಗದೀಪ್ ಧನ್ಕರ್ ಅವಹೇಳನ ಖಂಡಿಸಿ ಪ್ರತಿಭಟನೆ

ಸುರತ್ಕಲ್: ಲೋಕಸಭೆಯಲ್ಲಿ ವಿಪಕ್ಷ ಕೂಟದ ಸದಸ್ಯರು ಪ್ರತಿಭಟನೆ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ, ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮಂಗಳೂರು ನಗರ ಉತ್ತರ ವತಿಯಿಂದ ಸುರತ್ಕಲ್ ನಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು, “ಜಗದೀಪ್ ಧನ್ಕರ್ ಅವರ ಮನನೋಯಿಸುವ ಕೆಲಸವನ್ನು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ಮಾಡಿವೆ. ಇಂತಹ ಅಪಮಾನವನ್ನು ಭಾರತ ದೇಶದ ಜನರು ಖಂಡಿತಾ ಸಹಿಸುವುದಿಲ್ಲ. ರಾಹುಲ್ ಗಾಂಧಿಯಂತಹ ತಲೆಕೆಟ್ಟವನನ್ನು ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಾರೆ. ಆದರೆ ಆತ ಲೋಕಸಭೆಯಲ್ಲಿ ತಲೆಯಲ್ಲಿ ಬುದ್ಧಿ ಇಲ್ಲದವನಂತೆ ವರ್ತಿಸುತ್ತಿದ್ದಾನೆ. ಇಂತವರು ಒಟ್ಟು ಸೇರಿ ಬಿಜೆಪಿ ಪಕ್ಷ ಮತ್ತು ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.


ಬಳಿಕ ಮಾತಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು, “ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಉಪರಾಷ್ಟ್ರಪತಿ ಅವರನ್ನು ಅಪಮಾನಿಸುವ ಕೆಲಸಕ್ಕೆ ಇಳಿದಿದೆ. ಕಾಂಗ್ರೆಸ್ ನಾಯಕರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರನ್ನು ಎದುರಿಸಲು ತಾಕತ್ತಿಲ್ಲದ ಕಾಂಗ್ರೆಸ್ ಇಂತಹ ನೀಚ ರಾಜಕಾರಣಕ್ಕೆ ಇಳಿದಿದೆ” ಎಂದು ಹೇಳಿದರು.


ಈ ಸಂದರ್ಭದಲ್ಲಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ಪ್ರತಾಪ್ ಸಿಂಹ ನಾಯಕ್, ಪೂಜಾ ಪೈ, ಕಸ್ತೂರಿ ಪಂಜ, ಬಿಜೆಪಿ ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಕಾರ್ಪೋರೇಟರ್ ಗಳಾದ ಲಕ್ಷ್ಮಿ, ಲೋಕೇಶ್ ಬೊಳ್ಳಾಜೆ, ವರುಣ್ ಚೌಟ, ಸುಮಿತ್ರಾ ಕರಿಯ, ಲಕ್ಷ್ಮಿ ಶೇಖರ್ ದೇವಾಡಿಗ, ನಯನ ಕೋಟ್ಯಾನ್, ಶೋಭಾ ರಾಜೇಶ್, ಪುಷ್ಪರಾಜ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!