ಮಂಗಳೂರು: ಕಳೆದ 25 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ.ಎಂ.ಅಣ್ಣಯ್ಯ ಕುಲಾಲ್ ಅವರಿಗೆ ಈ ಬಾರಿಯ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ಲಭಿಸಿದೆ.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕನ್ನಡಕಟ್ಟೆ, ಭಾರತೀಯ ವೈದ್ಯಕೀಯ ಸಂಘ, ಕುಟುಂಬ ವೈದ್ಯರ ಸಂಘಟನೆ, ವೈದ್ಯ ಬರಹಗಾರರ ಬಳಗ, ಬೈರಾಡಿಕೆರೆ ಹೋರಾಟ ಸಮಿತಿ, ಕುಲಾಲ ಯುವವೇದಿಕೆ ಸಹಿತ ಹತ್ತಾರು ಸಮಾಜಮುಖಿ ಸಂಘಟನೆಗಳು ಹಾಗೂ ಸಮಾನ ಮನಸ್ಕ ಮಿತ್ರರ ಜೊತೆ ಸೇರಿಕೊಂಡು ಆರೋಗ್ಯ, ಶಿಕ್ಷಣ, ನಾಡು, ನುಡಿ, ನೆಲ, ಜಲ, ಪರಿಸರ, ಸಾಹಿತ್ಯ ಸಂಘಟನಾ ಸೇವೆ, ಆರೋಗ್ಯ ಜಾಗೃತಿ ಸೇವೆಗಳನ್ನು ಪರಿಗಣಿಸಿ ಡಾ.ಎಂ.ಅಣ್ಣಯ್ಯ ಕುಲಾಲ್ ಅವರನ್ನು ಮೈಸೂರಿನ ಪ್ರತಿಷ್ಠಿತ ಹೊಯ್ಸಳ ಪುರಸ್ಕಾರಕ್ಕೆ ಆರಿಸಲಾಗಿತ್ತು.
ಡಿ.24ರಂದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನ ವೀಣೆ ಶೇಷಣ್ಣ ಕಲಾಭವನದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಪ್ರಾಜ್ಞರ ಸಮ್ಮುಖದಲ್ಲಿ ಆಯ್ದ 18 ಮಂದಿ ಹಿರಿಯ ಸಾಧಕರ ಜೊತೆ ಅವರನ್ನು ಪುರಸ್ಕರಿಸಲಾಯಿತು. ಮೈಸೂರಿನ ಪ್ರತಿಷ್ಠಿತ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾಬಳಗ, ಮೈಸೂರಿನ ಇನ್ನಿತರ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಜೊತೆ ಸೇರಿ ಪ್ರತೀ ವರ್ಷದಂತೆ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.