“ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ” -ಡಾ. ಭರತ್ ಶೆಟ್ಟಿ

ಮುಚ್ಚೂರು ಕಿಂಡಿ ಅಣೆಕಟ್ಟು-ಸಂಪರ್ಕ ಸೇತುವೆ ಉದ್ಘಾಟನೆ


ಸುರತ್ಕಲ್: ಮಂಗಳೂರು ತಾಲೂಕಿನ ಮುಚ್ಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಚ್ಚೂರು ಕಾನ ಅಮ್ನಿಕೋಡಿ ಎಂಬಲ್ಲಿ ನಂದಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೂತನ ಕಿಂಡಿ ಅಣೆಕಟ್ಟು ಮತ್ತು ಸಂಪರ್ಕ ಸೇತುವೆ ಉದ್ಘಾಟಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು, ದೀಪ ಬೆಳಗಿಸಿ ನಂದಿನಿ ನಮನ ಕಾರ್ಯಕ್ರಮ ಉದ್ಘಾಟಿಸಿದರು.


ಸಮಾರಂಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ರಾಜಕೀಯ ವ್ಯಕ್ತಿಯಾಗಿಕೊಂಡು, ಗ್ರಾಮೀಣ ಭಾಗದದಲ್ಲಿ ಸಾಮಾಜಿಕ ಕಾಳಜಿಯಿಂದ ಮಾಡುವ ಇಂತಹ ಅಭಿವೃದ್ಧಿ ಕೆಲಸಗಳು ಹೆಚ್ಚು ಖುಷಿ ನೀಡುತ್ತವೆ. ಇದು ಗ್ರಾಮೀಣ ಪ್ರದೇಶದ ರೈತರ ಮುಖದಲ್ಲಿ ನಗು ಕಾಣುವ ಕೆಲಸವಾಗಿದೆ. ಶಾಸಕನಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಮಾನ ಆದ್ಯತೆ ನೀಡುತ್ತಿದ್ದೇನೆ ಎಂದರು.


ಮುಚ್ಚೂರು ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಎ. ಎಸ್. ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಜನಾರ್ದನ ಗೌಡ ಮಾತನಾಡಿದರು. ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ, ಸದಸ್ಯರಾದ ಲವಿನಾ ಜೇಸನ್ ಡಿ’ಸೋಜ ಕಲ್ಯಾನಿ, ಮುಚ್ಚೂರು ಗ್ರಾಮ ಪಂಚಾಯತ್ ಸದಸ್ಯ ರೇಖಾ ರೂಪೇಶ್, ಸ್ಥಳ ದಾನಿಗಳಾದ ವಿಲಿಯಂ, ಪ್ರತಾಪ್ ಹಾಗೂ ಜ್ಞಾನ ರತ್ನ ಎಜ್ಯುಕೇಶನ್ ಮತ್ತು ಚಾರಿಟೇಬಲ್ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ ಗೌಡ ದೇವಸ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಜನಾರ್ದನ ಗೌಡ ಅವರನ್ನು ಸ್ಥಳೀಯರು ಸನ್ಮಾನಿಸಿದರು. ಅಶೋಕ್ ನಾಯ್ಕ್ ನಿರೂಪಿಸಿದರೆ, ರೂಪೇಶ್ ವಂದಿಸಿದರು.
ಕಿಂಡಿ ಅಣೆಕಟ್ಟು ಮತ್ತು ಸಂಪರ್ಕ ಸೇತುವೆ ನಿರ್ಮಾಣದಿಂದ ಈ ಭಾಗದ ರೈತಾಪಿ ವರ್ಗದ ಬಹುದಿನಗಳ ಕನಸು ಈಗ ನನಸಾದಂತಾಗಿದೆ. ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯು 4 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಈ ಕಿಂಡಿ ಅಣೆಕಟ್ಟು ಮುಚ್ಚೂರು, ನೀರುಡೆ, ಕಾಯರ್ಮುಗೇರ್ ಪ್ರದೇಶದ ರೈತರ ಕೃಷಿಗೆ ನೀರು ಒದಗಿಸುವುದಲ್ಲದೆ ಕಲ್ಲಮುಂಡ್ಕೂರು, ನಿಡ್ಡೋಡಿ, ನೀರುಡೆ, ಬುಡಿಗಾಡು, ಎಕ್ಕಾರು, ಪಡೀಲ್, ಪೆರ್ಮುದೆ ಭಟ್ರಕೆರೆ, ಬಜ್ಪೆ ಪ್ರದೇಶದ ಜನರಿಗೆ ಬಹುಮುಖ್ಯ ಸಂಪರ್ಕ ಸೇತುವೆ ರಸ್ತೆಯಾಗಲಿದೆ.

error: Content is protected !!