ಸುರತ್ಕಲ್: ಮೂಲ್ಕಿ ಸಮೀಪದ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಕರ್ನಾಟಕ ರಾಜ್ಯದ ಪ್ರವಾಸಿ ತಾಣಗಳ ಸೇರ್ಪಡೆಯಾಗಿದ್ದು ಭಕ್ತರ ಹರ್ಷಕ್ಕೆ ಕಾರಣವಾಗಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ಪ್ರವಾಸಿ ತಾಣಗಳ ಪಟ್ಟಿಗೆ ಬಪ್ಪನಾಡು ದೇವಸ್ಥಾನವನ್ನು ಸೇರ್ಪಡೆಗೊಳಿಸಬೇಕೆಂದು ಭಕ್ತರ ಪರವಾಗಿ ಜೀವನ್ ಕೆ. ಶೆಟ್ಟಿ ಅವರು ಸರಕಾರಕ್ಕೆ ಮನವಿ ಮಾಡಿದ್ದರು.
ರಾಜ್ಯ ಪ್ರವಾಸೋದ್ಯಮ ಸಚಿವರಾದ ಸಿ.ಪಿ.ಯೋಗೀಶ್ವರ್, ಮಾಜಿ ಸಚಿವ ಪಿ.ಜಿ. ಆರ್. ಸಿಂಧ್ಯಾ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು, ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಹಿಂದಿನ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರಿಗೆ ಮನವಿ ಮಾಡಲಾಗಿತ್ತು.
ಸಸಿಹಿತ್ಲು ಬೀಚ್- ಭಗವತಿ ಕ್ಷೇತ್ರ-ಉಮಾಮಹೇಶ್ವರಿ ದೇವಸ್ಥಾನ(ಹೊಯ್ಗೆಗುಡ್ಡೆ)-ಚಿತ್ರಾಪು- ಕಲ್ಲಸಂಕ-ಪಡುಬೈಲು ಕೋರ್ದಬ್ಬು ದೈವಸ್ಥಾನ- ಕೊಳಚಿಕಂಬಳ ಮಂತ್ರ ಸರ್ಫಿಂಗ್ -ಬಪ್ಪನಾಡು ದೇವಸ್ಥಾನ ಇದನ್ನು ಟೂರಿಸಂ ಕಾರಿಡಾರ್ ಆಗಿ ಪರಿಗಣಿಸಿ ಅಭಿವೃದ್ಧಿಪಡಿಸಿದ್ದಲ್ಲಿ ಮುಲ್ಕಿ ತಾಲೂಕಿನಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮವನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವರಿಗೆ ವಿವರಿಸಲಾಗಿತ್ತು.
ಬಪ್ಪ ಬ್ಯಾರಿಗೆ ದೇವಿ ಅನುಗ್ರಹ ನೀಡಿ ನೆಲೆನಿಂತಿರುವ ಕಾರಣಿಕ ತಾಣವಾದ ಬಪ್ಪನಾಡು ದೇವಸ್ಥಾನಕ್ಕೆ ಪ್ರತಿನಿತ್ಯ ಅಸಂಖ್ಯ ಭಕ್ತರು ಆಗಮಿಸುತ್ತಾರೆ. ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ನಲ್ಲಿ ದೇವಸ್ಥಾನದ ಅಧಿಕೃತ ಮಾಹಿತಿ ಇಲ್ಲದೇ ಇರುವುದು ಹೊರಗಿನಿಂದ ಬರುವ ಭಕ್ತರಿಗೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಸ್ಪಂದಿಸಿದ ಸರಕಾರ ದೇವಸ್ಥಾನವನ್ನು ರಾಜ್ಯ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸಿ ಸುತ್ತೋಲೆ ಹೊರಡಿಸಿದೆ. ಇದು ಕ್ಷೇತ್ರದ ಭಕ್ತರಿಗೆ ಖುಷಿಯ ವಿಚಾರ, ನಮ್ಮ ಮನವಿಗೆ ಸ್ಪಂದಿಸಿದ ಸಚಿವರಿಗೆ ಧನ್ಯವಾದಗಳು ಎಂದು ಜೀವನ್ ಕೆ. ಶೆಟ್ಟಿ ಮಾಹಿತಿ ನೀಡಿದ್ದಾರೆ.