ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳದ ದಶಾವತಾರ ಯಕ್ಷಗಾನ ಮಂಡಳಿಯ ಪ್ರಸ್ತುತ ಸಾಲಿನ ಎಲ್ಲಾ ಆರು ಮೇಳ ತಿರುಗಾಟಕ್ಕೆ ಕಟೀಲು ದೇವಳದಲ್ಲಿ ಕ್ಷೇತ್ರದ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಗುರುವಾರ ಚಾಲನೆ ನೀಡಿದರು.
ಕಟೀಲು ಮೇಳದ ತಿರುಗಾಟದ ಪ್ರಯುಕ್ತ ಸಂಜೆ 5 ಗಂಟೆಗೆ ತಾಳಮದ್ದಳೆ ನಡೆದು 6 ಗಂಟೆಗೆ ಕಲಾವಿದರಿಗೆ ಗೆಜ್ಜೆ ನೀಡಿದ ಬಳಿಕ ಪ್ರತಿ ಮೇಳದ 2 ಕಲಾವಿದರಂತೆ ಆರು ಮೇಳದ 12 ಕಲಾವಿದರು ಆರು ಮೇಳದ ಭಾಗವತರ ಭಾಗವತಿಕೆಗೆ ದೇವಳದಲ್ಲಿ ಹೆಜ್ಜೆ ಹಾಕುವ ಮೂಲಕ ತಿರುಗಾಟ ಆರಂಭಗೊಂಡಿತು. ಬಳಿಕ ರಾತ್ರಿ ಚೌಕಿ ಪೂಜೆಯಾಗಿ ರಾತ್ರಿ 8.30ರಿಂದ ದೇವಳದ ರಥ ಬೀದಿಯಲ್ಲಿ ಎಲ್ಲಾ ಆರು ಮೇಳಗಳಿಂದ ಒಂದೇ ವೇದಿಕೆಯಲ್ಲಿ ಕಟೀಲು ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಲಾಯಿತು.
‘ಪಾಂಡವಾಶ್ವಮೇಧ’ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಿತು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಆಸ್ರಣ್ಣ ಬಂಧುಗಳು ಮತ್ತಿತರರು ಹಾಜರಿದ್ದರು.