ಹಳೆಯಂಗಡಿ: ಇತಿಹಾಸ ಪ್ರಸಿದ್ಧ ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಧುಸೂದನ್ ಆಚಾರ್ ಇವರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಬಲೀಂದ್ರ ಪೂಜೆ ನಿನ್ನೆ ನಡೆಯಿತು.
ದೀಪಾವಳಿ ಹಬ್ಬದ ಪೂಜಾ ವಿಧಿ ವಿಧಾನಗಳನ್ನು ನಡೆಸಿ, ಮಾತನಾಡಿದ ಅವರು, “ದೀಪಾವಳಿ ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬ. ದೀಪವೆಂದರೆ ಅರಿವು, ದೀಪವೆಂದರೆ ಜ್ಞಾನ, ದೀಪವೆಂದರೆ ಪ್ರಗತಿಯ ಪ್ರತೀಕ. ದೀಪವೆಂದರೆ ಚೈತನ್ಯದ ಸಂಕೇತ. ಅಜ್ಞಾನವೆಂಬ ಅಂಧಕಾರದಿಂದ ಜ್ಞಾನವೆಂಬ ಬೆಳಕಿನೆಡೆಗೆ ಪಯಣಿಸುವ ಪರ್ವಕಾಲವೇ ದೀಪಾವಳಿ. ಕಾರ್ತೀಕ ಮಾಸ ನಮ್ಮೆಲ್ಲರ ಬದುಕಿನಲಿ ಬೆಳಕು ತರಲಿ. ಬೆಳಕಿನ ಹಬ್ಬ ಬಾಳು ಬೆಳಗಲಿ.
ಅರಿವಿನ ಜ್ಞಾನ ದೀವಿಗೆಯಾಗಲಿ
ದೀಪಾವಳಿಯ ಈ ಬೆಳಕಿನ ಪರ್ವಕಾಲದಲ್ಲಿ ಸರ್ವರ ಬಾಳಿನಲ್ಲಿ ಸುಖ ಶಾಂತಿ ನೆಮ್ಮದಿಯೆಂಬ ಜ್ಯೋತಿಯು ಪ್ರಕಾಶಿಸಿ ಸಮಸ್ತರ ಜೀವನವು ಹಸನಾಗಿ, ನಾಡಿಗೆ ಸುಖ, ಸಂತೋಷ, ಸಮೃದ್ಧಿ, ಶ್ರೇಯಸ್ಸು ತರಲಿ, ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಅತ್ಯಂತ ವೇಗವಾಗಿ ನಡೆಯಲಿ” ಎಂದು ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್, ಸಮಿತಿ ಸದಸ್ಯರಾದ ಲೋಕಯ್ಯ ಸಾಲ್ಯಾನ್, ಪುರುಷೋತ್ತಮ ರಾವ್, ಯೋಗೀಶ್ ಕೋಟ್ಯಾನ್, ವಿಪುಲ ಡಿ. ಶೆಟ್ಟಿಗಾರ್, ದೇವಾಲಯದ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತ್ ಸದಸ್ಯರಾದ ಹೇಮನಾಥ ಅಮೀನ್, ಶ್ರೀಮತಿ ಪ್ರಮೀಳಾ ಡಿ. ಶೆಟ್ಟಿ, ಯುವಕ ಸಂಘದ ಅಧ್ಯಕ್ಷರಾದ ಶೇಖರ್ ಶೆಟ್ಟಿಗಾರ್, ಮಹಿಳಾ ಮಂಡಲದ ಅಧ್ಯಕ್ಷರಾದ ಅನುಪಮಾ ರಾವ್ ಮತ್ತು ಊರ ಪರ ಊರ ಭಕ್ತರು ಉಪಸ್ಥಿತರಿದ್ದರು. ನಂತರ ಪ್ರಸಾದ ವಿತರಣೆ ನಡೆಯಿತು.