ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ನವ ದಂಪತಿ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ!

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇತ್ತೀಚೆಗಷ್ಟೇ ವಿವಾಹವಾಗಿದ್ದ ನವದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಭಾನುವಾರ(ಫೆ.01) ಬೆಳಿಗ್ಗೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ (34) ಮತ್ತು ಅವರ ಪತ್ನಿ ಐಶ್ವರ್ಯಾ (30) ಮೃತ ದಂಪತಿ.

ದಂಪತಿ ಮದುವೆಯಾಗಿ ಕೇವಲ 15 ದಿನಗಳು ಕಳೆದಿದ್ದವು. ಭಾನುವಾರ ಬೆಳಿಗ್ಗೆ ಶಿಗ್ಗಾಂವ್ ತಾಲ್ಲೂಕಿನ ಕಡಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ದರ್ಶನ ಮುಗಿಸಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಅವರ ಕಾರು, ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

error: Content is protected !!