“ಕಾಣಿಯೂರು ವ್ಯಾಪಾರಿಗಳ ಮೇಲಿನ ಹಲ್ಲೆಕೋರರನ್ನು ಕೊಡಲೇ ಬಂಧಿಸಿ” -ಹ್ಯಾರಿಸ್ ಬೈಕಂಪಾಡಿ

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದ ಕೊಲೆಯತ್ನ ಹಾಗೂ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿಯಾದ ಹಾರಿಸ್ ಬೈಕಂಪಾಡಿಯವರು ಒತ್ತಾಯಿಸಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ಪ್ರಕರಣ ದಾಖಲಿಸುವಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ,
ಕಾಣಿಯೂರು ಪ್ರದೇಶದಲ್ಲಿ ಹೊಟ್ಟೆಪಾಡಿಗಾಗಿ ದೂರದ ಮಂಗಳೂರಿನ ಅಡ್ಡೂರಿನ ಯುವಕರು ಹಲವಾರು ವರ್ಷಗಳಿಂದ ಸದ್ರಿ ಪ್ರದೇಶದಲ್ಲಿ ಚಿರಪರಿಚಿತರಾಗಿರುವ ಜವಳಿ ಮಾರಾಟಮಾಡಲು ತೆರಳಿದ್ದ ಮಂಗಳೂರಿನ ಅಡ್ಡೂರಿನ ವ್ಯಾಪಾರಸ್ಥರಾದ ರಫೀಕ್ ಮತ್ತು ರಮೀಝ್ ಎಂಬವರ ಮೇಲೆ ಸಂಘ ಪರಿವಾರದವರು ಎನ್ನಲಾದ ಬಿಜೆಪಿ ಬೆಂಬಲಿತರು ಎಂದು ಆರೋಪಿಸಲಾಗಿರುವ ಗುಂಪೊಂದು ಮಾರಣಾಂತಿಕ ಹಲ್ಲೆಯನ್ನು ನಡೆಸಿ, ಕೊಲೆಯತ್ನ ನಡೆಸಿ, ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹಾರಿಸ್ ಬೈಕಂಪಾಡಿಯವರು ಹಲ್ಲೆ ನಡೆಸಿದ ತಪ್ಪಿತಸ್ಥರನ್ನು ಕಠಿಣ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ,
ಅಡ್ಡೂರಿನ ರಫೀಕ್ ಮತ್ತು ರಮೀಝ್ ಅನ್ನುವ ಜವಳಿ ವ್ಯಾಪಾರಿಗಳು ಕಳೆದ ಹಲವಾರು ವರುಷಗಳಿಂದ ಜಿಲ್ಲೆಯ ನಾನಾ ಕಡೆ ಮನೆ ಮನೆ ತೆರಳಿ ಬೆಡ್ ಶೀಟ್ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಅವರು ಕಾಣಿಯೂರು ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಮುಸಲ್ಮಾನರು ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಬೆಂಬಲಿತ ಸಂಘ ಪರಿವಾರದವರು ಅಕ್ರಮ ಕೂಟ ಸೇರಿಕೊಂಡು ಪೂರ್ವ ನಿಯೋಜಿತವಾಗಿ ಅವರ ಮೇಲೆ ಮುಗಿಬಿದ್ದು ಕಬ್ಬಿಣದ ರಾಡ್, ದೊಣ್ಣೆ ಇನ್ನಿತರ ಆಯುಧಗಳಿಂದ ಕೈಕಾಲು ಮುರಿಯುವಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಲ್ಲದೆ, ಅವರ ಮೈಮೇಲೆ ವಾಹನಗಳನ್ನು ಹತ್ತಿಸಿ ಕೊಲೆಯತ್ನಕ್ಕೂ ಪ್ರಯತ್ನಿಸಿರುತ್ತಾರೆ” ಅಲ್ಲದೆ
ಸತತ ಎರಡು ಗಂಟೆಗಳ ಕಾಲ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸರಕಾರ ಘಟನೆಯನ್ನು ತಿಳಿದು ತಿಳಿಯದ ಹಾಗೆ ಪ್ರಕರಣ ನಡೆದು ಎರಡು ದಿನಗಳಾದರೂ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಈವರೆಗೂ ಯಾವೊಬ್ಬ ಆರೋಪಿಗಳನ್ನು ಅಧಿಕೃತವಾಗಿ ಬಂಧಿಸದೆ, ಪೊಲೀಸ್ ಠಾಣೆಯಲ್ಲೇ ಜಾಮೀನು ನೀಡಬಹುದಾದ ಸಾಮಾನ್ಯ ಸಣ್ಣ ಸೆಕ್ಷನ್ ಗಳಡಿ ಪ್ರಕರಣ ದಾಖಲು ಮಾಡಿ ಮತೀಯ ತಾರತಮ್ಯವನ್ನು ಎಸಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಚುನಾವಣೆ ಹತ್ತಿರವಾಗುತ್ತಿದ್ದಂತೆ
ಮುಸಲ್ಮಾನರನ್ನು ಗುರಿಯಾಗಿಸಿ ಪದೇ ಪದೇ ಇಂತಹ ಕ್ಷುಲ್ಲಕ ವಿಚಾರಕ್ಕೆ ಸಂಬಂಧ ಪಟ್ಟಂತೆ ನಿರಂತರವಾಗಿ ನಡೆಯುವಂತಹ ದಾಳಿಗಳಿಂದ ಮುಸಲ್ಮಾನರು ಭಯಭೀತರಾಗಿದ್ದು ಅಲ್ಪ ಸಂಖ್ಯಾತ ಮುಸಲ್ಮಾನ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದ್ದು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಕಾಣಿಯೂರು ಘಟನೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ,
ಈ ಘಟನೆಯನ್ನು ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕ ಈಗಾಗಲೇ ಖಂಡನೆ ವ್ಯಕ್ತಪಡಿಸಿದ್ದು ರಾಜ್ಯಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯರೂ ಆದ ಕೆ.ಅಬ್ದುಲ್ ಜಬ್ಬಾರ್ ರವರು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಗ್ರಹ ಸಚಿವರನ್ನು ಭೇಟಿ ಮಾಡಲಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಹಾಗೂ ಮುಸ್ಲಿಂ ಜವಳಿ ವ್ಯಾಪಾರಿಗಳಾದ ರಫೀಕ್ ಮತ್ತು ರಮೀಝ್ ಮೇಲಿನ ಕೊಲೆಯತ್ನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಮಾಡಿ ಕೊಲೆಯತ್ನ ಪ್ರಕರಣದಡಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

error: Content is protected !!