ದುಬೈ: ಫೆಬ್ರವರಿ 24ರಂದು ಉಪಗ್ರಹ ತೆಗೆದ ಚಿತ್ರಗಳಲ್ಲಿ ದುಬೈ ಎಂದಿನಂತೆ ಜಗಮಗಿಸುತ್ತಿತ್ತು. ಅಚ್ಚುಕಟ್ಟಾದ ಹೆದ್ದಾರಿಗಳು, ಆಕಾಶಚುಂಬಿ ಕಟ್ಟಡಗಳು ಮತ್ತು ಸಮುದ್ರದ ನಡುವೆ ತೇಲುವಂತಿದ್ದ ಕೃತಕ ದ್ವೀಪಗಳು ಆ ನಗರದ ಐಶ್ವರ್ಯವನ್ನು ಸಾರುತ್ತಿದ್ದವು. ಆದರೆ, ಕೇವಲ ನಾಲ್ಕು ದಿನಗಳ ನಂತರ, ಮಾರ್ಚ್ 1ರಂದು ಅದೇ ಉಪಗ್ರಹ ರವಾನಿಸಿದ ಚಿತ್ರಗಳು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿವೆ. ಅದೇ ಮಿನುಗುವ ನಗರಿಯ ಆಕಾಶದಲ್ಲಿ ಈಗ ದಟ್ಟವಾದ, ಕರಾಳ ಕಪ್ಪು ಹೊಗೆಯ ರಾಶಿ ಏಳುತ್ತಿದೆ! ಪ್ರವಾಸಿಗರ ಸ್ವರ್ಗ, ವಲಸಿಗರ ಸುರಕ್ಷಿತ ತಾಣವೆನಿಸಿಕೊಂಡಿದ್ದ ದುಬೈ ಇದೀಗ ಆರಂಕದ ಕರಿನೆರಳಿನಲ್ಲಿದೆ.

ಶನಿವಾರ ಮುಂಜಾನೆ, ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತರಾದ ಸುದ್ದಿ ಹರಡುತ್ತಿದ್ದಂತೆ, ಇಡೀ ಮಧ್ಯಪ್ರಾಚ್ಯದಲ್ಲಿ ಆತಂಕದ ಛಾಯೆ ಆವರಿಸಿತು. ಇರಾನ್ ಸುಮ್ಮನೆ ಕೂರಲಿಲ್ಲ. ಪ್ರತಿಕಾರದ ಜ್ವಾಲೆಯಲ್ಲಿ ಬೆಂದ ಅದು, ಗಲ್ಫ್ ರಾಷ್ಟ್ರಗಳತ್ತ ನೂರಾರು ಡ್ರೋನ್ ಮತ್ತು ಕ್ಷಿಪಣಿಗಳ ಸುರಿಮಳೆಗರೆಯಿತು.

ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ದುಬೈ ಕೂಡ ಇರಾನ್‌ನ ಪ್ರಮುಖ ಗುರಿಯಾಗಿತ್ತು. ದುಬೈನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು ಬಹುತೇಕ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿತು. ಆದರೆ, ಆ ಕ್ಷಿಪಣಿಗಳ ಅವಶೇಷಗಳು ಮತ್ತು ಕೆಲವು ಡ್ರೋನ್‌ಗಳು ನಗರದ ಪ್ರಮುಖ ಆಸ್ತಿಗಳ ಮೇಲೆ ಬಿದ್ದವು.
ಪಾಮ್ ಜುಮೇರಾ: ವಿಶ್ವವಿಖ್ಯಾತ ಕೃತಕ ದ್ವೀಪ ಸಮೂಹವಾದ ಪಾಮ್ ಜುಮೇರಾದ ಐಷಾರಾಮಿ ವಸತಿ ಸಂಕೀರ್ಣಗಳ ಬಳಿ ಕ್ಷಿಪಣಿಗಳ ಅವಶೇಷಗಳು ಬಿದ್ದು ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿನ ಐಷಾರಾಮಿ ಹೋಟೆಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಈಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ.

ಬುರ್ಜ್ ಅಲ್ ಅರಬ್: ವಿಶ್ವದ ಏಕೈಕ ಏಳು ನಕ್ಷತ್ರಗಳ ಹೋಟೆಲ್ ಎನಿಸಿಕೊಂಡಿರುವ ಬುರ್ಜ್ ಅಲ್ ಅರಬ್ ಬಳಿಯೂ ಸ್ಫೋಟದ ಸದ್ದು ಕೇಳಿಬಂದಿದ್ದು, ಆ ಪ್ರದೇಶದಿಂದಲೂ ಹೊಗೆ ಏಳುತ್ತಿದೆ.
ದುಬೈನ ಜನಸಂಖ್ಯೆಯಲ್ಲಿ ಶೇ. 90ರಷ್ಟು ಜನ ವಿದೇಶಿ ವಲಸಿಗರು. ತೆರಿಗೆ ಮುಕ್ತ ಆದಾಯ ಮತ್ತು ಸುರಕ್ಷಿತ ಜೀವನದ ಆಸೆಯಿಂದ ಇಲ್ಲಿಗೆ ಬಂದಿದ್ದ ಅವರಿಗೆ ಈಗ ಅಭದ್ರತೆಯ ಭಯ ಕಾಡುತ್ತಿದೆ. ಎಂದೂ ಇಂತಹ ಪರಿಸ್ಥಿತಿ ಕಾಣದ ದುಬೈ ಈಗ ಸ್ತಬ್ಧವಾಗಿದೆ. ಸರ್ಕಾರವು ಖಾಸಗಿ ವಲಯದ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.
