ಸುರತ್ಕಲ್: ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಕುರಿತು ಫೇಸ್ಬುಕ್ ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದ ಕೀರ್ತನ್ ಶೆಟ್ಟಿ ಅಡ್ಯಾರ್ ಎಂಬಾತ ನ್ಯಾಯಾಲಯಕ್ಕೆ ಶರಣಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ. ಈತನ ಪೋಸ್ಟ್ ಗೆ ಅಶ್ಲೀಲ ಕಾಮೆಂಟ್ಸ್ ಮಾಡಿರುವ ಆರೋಪ ಎದುರಿಸುತ್ತಿರುವ “ಕಹಳೆ ನ್ಯೂಸ್” ಸಂಪಾದಕ ಶ್ಯಾಮ್ ಸುದರ್ಶನ್ ಭಟ್ ಇನ್ನೂ ನಾಪತ್ತೆಯಾಗಿದ್ದಾನೆ. ಆತ ನಿರೀಕ್ಷಣಾ ಜಾಮೀನಿಗೆ ಪ್ರಯತ್ನ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಗುರುತಿಸಿಕೊಂಡಿರುವ ಪ್ರತಿಭಾ ಕುಳಾಯಿ ಕುರಿತು ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಹಾಗೂ ಕೆ.ಆರ್.ಶೆಟ್ಟಿ ಅಡ್ಯಾರ್ ಪದವು ಫೇಸ್ಬುಕ್ ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಭಾ ಕುಳಾಯಿ ಪ್ರೆಸ್ ಮೀಟ್ ಕರೆದು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಿಧ ಸಂಘಟನೆಗಳು, ಕಾಂಗ್ರೆಸ್ ಪಕ್ಷ ಪ್ರತಿಭಾ ಪರ ನಿಂತಿದ್ದು ಮಹಿಳಾ ದೌರ್ಜನ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶ್ಯಾಮ್ ಭಟ್ ಮನೆಮಂದಿಯೊಂದಿಗೆ ನಾಪತ್ತೆಯಾಗಿದ್ದು ಪೊಲೀಸ್ ತಂಡಗಳು ಹುಡುಕಾಟ ನಡೆಸುತ್ತಿವೆ.