ಚೆನ್ನೈ: ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿರುವಂತಹ ಚೆನ್ನೈ ಸೂಪರ್ ಕಿಂಗ್ಸ್, 2026ರ ಆವೃತ್ತಿಗಾಗಿ ನೂತನ ಜೆರ್ಸಿ ಬಿಡುಗಡೆ ಮಾಡಿದೆ.

6ನೇ ಕಪ್ ಗೆಲ್ಲುವ ಗುರಿಯೊಂದಿಗೆ ಸಿಎಸ್‌ಕೆ ಈಗಾಗಲೇ ಅಭ್ಯಾಸವನ್ನೂ ಆರಂಭಿಸಿದೆ. ಭಾನುವಾರ, ತಂಡದ ಅಭ್ಯಾಸಕ್ಕಾಗಿ ಆಗಮಿಸುತ್ತಿರುವ ಆಟಗಾರರ ಚಿತ್ರ, ವೀಡಿಯೋಗಳನ್ನು ಸಿಎಸ್‌ಕೆ ತನ್ನ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ. ನೂತನ ಜೆರ್ಸಿಯ ವೀಡಿಯೋವನ್ನೂ ಹಾಕಿಕೊಂಡಿದೆ.

ಸಿಎಸ್‌ಕೆಯ ಕಳೆದ ಬಾರಿಯ ಜೆರ್ಸಿಗೂ ಈ ಬಾರಿಯ ಜೆರ್ಸಿಗೂ ಅಂಥಹದೇನು ವ್ಯತ್ಯಾಸವಿಲ್ಲ. ‘ಇತಿಹಾದ್’ ಪ್ರಾಯೋಜಕತ್ವದ ಹೊಸ ಜೆರ್ಸಿಯಲ್ಲೂ ಕಳೆದ ಬಾರಿ ಇದ್ದಂತೆ 5 ಬಾರಿ ಕಪ್ ಜಯಿಸಿದ ಸಂಕೇತವಾಗಿ ಎದೆಯ ಭಾಗದಲ್ಲಿ 5 ನಕ್ಷತ್ರಗಳಿವೆ. ಅದೇ ಹಳದಿ ಬಣ್ಣ ಉಳಿದುಕೊಂಡಿದೆ. ತಂಡದ ನಾಯಕ ಋತುರಾಜ್ ಗಾಯಕ್ವಾಡ್ ವೀಡಿಯೋ ಮೂಲಕ ಜೆರ್ಸಿ ಬಿಡುಗಡೆ ಮಾಡಿದರು.
ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಈ ಐಪಿಎಲ್ ಆವೃತ್ತಿಯಲ್ಲಿ ಆಡುತ್ತಾರೆ ಎನ್ನುವುದನ್ನು ಫ್ರಾಂಚೈಸಿ ಕಳೆದ ವಾರವೇ ತಿಳಿಸಿತ್ತು. ಅದರಂತೆ ಅವರು ಭಾನುವಾರ ಅಭ್ಯಾಸದಲ್ಲಿ ಪಾಲ್ಗೊಂಡರು. ಉರ್ವಿಲ್ ಪಟೇಲ್, ಸರ್ಫರಾಜ್ ಖಾನ್, ಆಯುಷ್ ಮ್ಹಾತ್ರೆ, ನಾಯಕ ಋತುರಾಜ್ ಗಾಯಕ್ವಾಡ್ ಮತ್ತಿತರರೂ ನೆಟ್ ಅಭ್ಯಾಸ ನಡೆಸಿದರು.