ಮೂಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ತೋಕೂರು ಬಳಿ ಬಾಡಿಗೆ ಮನೆಯಲ್ಲಿದ್ದ ಅಕ್ಕಪಕ್ಕದಲ್ಲಿ ಉಳಿದುಕೊಂಡಿದ್ದ ವ್ಯಕ್ತಿ ಮತ್ತು ಯುವತಿಗೆ ತಂಡವೊಂದು ಲವ್ ಜಿಹಾದ್ ಆರೋಪದ ಮೇಲೆ ಥಳಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಇಬ್ಬರೂ ಉತ್ತರ ಕರ್ನಾಟಕ ಮೂಲದವರಾಗಿದ್ದು ವ್ಯಕ್ತಿ ಮುಸ್ಲಿಂ ಆಗಿದ್ದರೆ ಯುವತಿ ಹಿಂದೂ ಧರ್ಮಕ್ಕೆ ಸೇರಿದವವರು.
ತೋಕೂರಿನ ಪ್ರಫುಲ್ಲ ಶೆಟ್ಟಿಗಾರ್ ಎಂಬವರ ಬಾಡಿಗೆ ಮನೆಯಲ್ಲಿ ಉತ್ತರ ಕರ್ನಾಟಕ ಮೂಲದ ಸಮೀರ್ ಎಂಬಾತ ವಾಸವಿದ್ದು ಪಕ್ಕದ ಮನೆಯಲ್ಲಿ ಸವಿತಾ ಎಂಬವರು ವಾಸವಿದ್ದರು. ಸವೀತಾ ತಂದೆ ತಾಯಿ ಸತ್ತಿದ್ದು ಬಾಡಿಗೆ ಮನೆಯಲ್ಲಿದ್ದು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಸಮೀರ್ ಎಳನೀರು ವ್ಯಾಪಾರಿಯಾಗಿದ್ದು ಮದುವೆಯಾಗಿದ್ದಾನೆ. ಇವರಿಬ್ಬರು ಮದುವೆ ಆಗಿದ್ದಾರೆ ಎಂದು ಆರೋಪಿಸಿದ ಭಜರಂಗದಳ ಕಾರ್ಯಕರ್ತರು ರಾತ್ರಿ ಜಮಾಯಿಸಿದ್ದು ಸಮೀರ್ ಬೈಕ್ ಅನ್ನು ತಡೆದು ಥಳಿಸಿದ್ದಾರೆ. ಅಷ್ಟರಲ್ಲಿ ಮೂಲ್ಕಿ ಪೊಲೀಸರು ಸ್ಥಳಕ್ಕಾಗಮಿಸಿದ್ದು ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಸಮೀರ್ ತನಗೂ ಅವಳಿಗೂ ಯಾವುದೇ ಸಂಬಂಧವಿಲ್ಲ. ತಾಯಿ ಸತ್ತ ಮೇಲೆ ಊರಿಗೆ ಹೋಗಿ ಎಂದರೂ ಅವರು ಹೋಗುತ್ತಿಲ್ಲ. ಇಲ್ಲಿದ್ದು ಕೆಲಸ ಮಾಡುತ್ತೇನೆ ಎನ್ನುತ್ತಾರೆ. ನನಗೆ ಊರಿನಲ್ಲಿ ಹೆಂಡತಿ ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. ಬಜರಂಗದಳ ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ್ದು ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.