ಸುರತ್ಕಲ್: ಸುರತ್ಕಲ್ ಟೋಲ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟಗಾರರ ಸಮಿತಿ ಕರೆ ನೀಡಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್ ದೂಡಿ ಟೋಲ್ ಪ್ಲಾಝ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಈ ವೇಳೆ ಪೊಲೀಸರು ನೂರಾರು ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟೋಲ್ ಗೇಟ್ ಮುತ್ತಿಗೆ ಸಂದರ್ಭ ಪೋಲಿಸ್ ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ಪ್ರಯೋಗ ಮಾಡಿರುವ ಆರೋಪ ವ್ಯಕ್ತವಾಗಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರ ಅಬ್ದುಲ್ ಖಾದರ್ ಎಂಬವರ ಕಣ್ಣಿಗೆ ಲಾಠಿ ತಾಗಿ ಗಾಯಗೊಂಡಿದ್ದು, ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ಎಳೆದುಕೊಂಡು ಹೋಗಿ ಬಸ್ಸಿಗೆ ತುಂಬಿಸಿದರು. ಟೋಲ್ ಗೇಟ್ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಿದ್ದರೆ ಸಾವಿರಾರು ಮಂದಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ, ಐವನ್ ಡಿಸೋಜ, ಡಿವೈಎಫ್ ಐ ನ ಮುನೀರ್ ಕಾಟಿಪಳ್ಳ, ಬಿಕೆ ಇಮ್ತಿಯಾಜ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಮೊಯಿದೀನ್ ಬಾವಾ, ಜೆ ಅರ್ ಲೋಬೊ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶಮಿರ್ ಸುರತ್ಕಲ್, ಸಾಲೆ ಮುಹಮ್ಮದ್, ಶಾಲೆಟ್ ಪಿಂಟೋ, ಹ್ಯಾರಿಸ್ ಬೈಕಂಪಾಡಿ, ಪದ್ಮರಾಜ್, ಶಕುಂತಲಾ ಶೆಟ್ಟಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದು ಬಂಧನಕ್ಕೊಳಗಾದರು.