ತೊಳೆದು ಪಾಲಿಶ್ ಮಾಡುವುದಾಗಿ ನಂಬಿಸಿ ಚಿನ್ನ ಕರಗಿಸಿ ವಂಚನೆ; ಆರೋಪಿ ಬಂಧನ

ಬೆಳ್ತಂಗಡಿ: ಚಿನ್ನದೊಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ, ಚಿನ್ನವನ್ನು ಯಾವುದೋ ದ್ರಾವಣ ಬಳಸಿ ಕರಗಿಸಿ ವಂಚಿಸಿರುವ ಪ್ರಕರಣ ಸಂಬಂಧ ಆರೋಪಿಯನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬೆಳ್ತಂಗಡಿ ಸಮೀಪ ನಡೆದಿದೆ.

ಬಿಹಾರ ಸುಫೋಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ (30) ಬಂಧಿತ ಆರೋಪಿ.

ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಪಣಿಲಾಜೆ ಎಂಬಲ್ಲಿ ಫೆ.10ರಂದು ಅಪರಿಚಿತನೊಬ್ಬ ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಬಳಿಕ ಚಿನ್ನವನ್ನು ದ್ರಾವಣ ಬಳಸಿ ಕರಗಿಸಿ ವಂಚಿಸಿದ್ದ. ಈ ಕುರಿತು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ವೇಣೂರು ಠಾಣಾ ಪೊಲೀಸರು, ಆರೋಪಿ ಚಂದನ್ ಕುಮಾರ್‌ನನ್ನು ದಸ್ತಗಿರಿ ಮಾಡಿ 75,000ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!