ಸುರತ್ಕಲ್ -ಸುಭಾಷಿತನಗರ ರಾಜಕಾಲುವೆಗೆ ಕೊಳಚೆ ನೀರು!

ಸುರತ್ಕಲ್: ಇಲ್ಲಿನ ಸುಭಾಷಿತ ನಗರದಲ್ಲಿ ಮಳೆಯ ನೀರು ಹರಿಯುವ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು ಇದರಿಂದ ಪರಿಸರದ ನಿವಾಸಿಗಳು ಮೂಗು ಮುಚ್ಚಿ ದಿನಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಪತ್ರಿಕೆಗೆ ದೂರಿದ್ದಾರೆ.
ಪರಿಸರದ ಕೆಲವು ಫ್ಲ್ಯಾಟ್ ಗಳು ಮತ್ತು ಮನೆಗಳಿಂದ ಕೊಳಚೆ ನೀರನ್ನು ನೇರವಾಗಿ ರಾಜಕಾಲುವೆಗೆ ಬಿಡಲಾಗುತ್ತಿದೆ. ಮಳೆಗಾಲದಲ್ಲಿ ತೋಡು ಪೂರ್ತಿ ನೀರು ಹರಿಯುವುದರಿಂದ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಮಳೆ ನಿಂತ ಅನಂತರ ತೋಡಿನಲ್ಲಿ ನೀರಿನ ಹರಿಯುವಿಕೆ ಕಡಿಮೆಯಾದಾಗ ಸುತ್ತಮುತ್ತಲಿನ ಪರಿಸರದಲ್ಲಿ ಅಸಹ್ಯ ವಾಸನೆ ಬರುತ್ತದೆ. ಇದರಿಂದ ಪ್ರದೇಶದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈ ಸಮಸ್ಯೆಯ ಕುರಿತು ನಗರಪಾಲಿಕೆಗೆ ಮನವಿ ಮಾಡಿದ್ದರೂ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ, ಸ್ಥಳೀಯಾಡಳಿತ ಕೂಡಲೇ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!