“ಕಾಂತಾರ” ನೋಡಿ ಯುವತಿಗೆ ಆವೇಶ!

ಸುರತ್ಕಲ್: ರಿಷಭ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರೋ ಕಾಂತಾರ ಕನ್ನಡ ಸಿನಿಮಾ ರಾಜ್ಯದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು ಸಿನಿಮಾದ ಪ್ರಾರಂಭ ಮತ್ತು ಅಂತ್ಯದ ಕ್ಲೈಮಾಕ್ಸ್ ದೃಶ್ಯ ಸಿನಿಮಾ ರಂಗದಲ್ಲಿ ಇಲ್ಲಿಯವರೆಗೆ ಯಾರೂ ಮಾಡಿಲ್ಲ ಅನ್ನೋ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಥಿಯೇಟರ್ ನಲ್ಲಿ ಸಿನಿಮಾ ನೋಡುತ್ತಿದ್ದ ಯುವತಿಯೊಬ್ಬಳು ಆವೇಶಕ್ಕೆ ಒಳಗಾಗಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಿತ್ರ ತೆರೆಕಂಡ ಶುಕ್ರವಾರ ರಾತ್ರಿಯ ಶೋ ಪಿವಿಆರ್ ಸಿನಿಮಾಸ್ ನಲ್ಲಿ ಘಟನೆ ನಡೆದಿದ್ದು ಚಿತ್ರದ ಕೊನೆಯ ಕ್ಲೈಮಾಕ್ಸ್ ದೃಶ್ಯದಲ್ಲಿ ನಾಯಕ ರಿಷಭ್ ಶೆಟ್ಟಿಗೆ ತುಳುವರ ಆರಾಧ್ಯ ಶಕ್ತಿ ಗುಳಿಗನ ಅವಾಹನೆಯಾಗಿ ದುಷ್ಟರನ್ನು ಹೊಡೆದುರುಳಿಸುವ ಸನ್ನಿವೇಶವಿದ್ದು ಇದನ್ನು ನೋಡುತ್ತಿದ್ದ ಯುವತಿ ಏಕಾಏಕಿ ಆವೇಶಕ್ಕೆ ಒಳಗಾಗಿ ಥಿಯೇಟರ್ ನಲ್ಲಿ ಬೊಬ್ಬೆ ಹಾಕಿದ್ದು ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು ಕಾಂತಾರ ಚಿತ್ರದ ಮೈ ನವಿರೇಳಿಸೋ ದೃಶ್ಯಗಳನ್ನು ಮೈಮರೆತು ನೋಡುತ್ತಿದ್ದರೆ ರೋಮಾಂಚನವಾಗುತ್ತೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.ಎದುರಿದ್ದವನು ಆವೇಶಕ್ಕೆ ಒಳಗಾದುದನ್ನು ನೋಡಿದ ಕೆಲವು ಮಂದಿ ಏಕಾಏಕಿ ಆವೇಶಕ್ಕೆ ಒಳಗಾಗುವುದು, ಬೊಬ್ಬೆ ಹೊಡೆಯುವುದು ಮಾಡುವುದು ನಡೆಯುತ್ತದೆ. ಇದಕ್ಕೆ ಸಮೂಹ ಸನ್ನಿ ಎಂದೂ ಕರೆಯುತ್ತಾರೆ. ಸೂಕ್ಷ್ಮ ಮತಿಗಳು ಬೇಗನೆ ಇಂತಹ ಸನ್ನಿವೇಶದಲ್ಲಿ ಪ್ರತಿಕ್ರಿಯೆ ನೀಡುತ್ತಾರೆ, ಚಿತ್ರವನ್ನು ತದೇಕಚಿತ್ತದಿಂದ ವೀಕ್ಷಿಸುವಾಗ ಜೋರಾದ ಸದ್ದಿಗೆ ಮಾನಸಿಕ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿದ್ದು ತಾವೂ ತಮಗೆ ಅರಿವಿಲ್ಲದೆ ರಿಯಾಕ್ಟ್ ಮಾಡುವ ಸಾಧ್ಯತೆ ಇರುತ್ತದೆ ಎಂದು ಮಾನಸಿಕ ತಜ್ಞರು ಘಟನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!