ಜು.11: ಹಿರಿಯ ನಾಗರಿಕರಿಗಾಗಿ ಬೋಳೂರಿನಲ್ಲಿ “ಹಾಡಾಡೋಣ ಬನ್ನಿ” ಕಾರ್ಯಕ್ರಮ

ಮಂಗಳೂರು: ಖ್ಯಾತ ಸಮಾಜ ಸೇವಕಿ ಮೀರಾ ಪಡಿಯಾರ್ ಅವರ ಸಾರಥ್ಯದಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷವಾಗಿ “ಹಾಡಾಡೋಣ ಬನ್ನಿ” ಎಂಬ ಕೆರೋಕೆ ಕಾರ್ಯಕ್ರಮ ನಡೆಯಲಿದೆ. “ನಾದಸಂಗಮ” ಸಂಸ್ಥೆಯ ವತಿಯಿಂದ ಜುಲೈ 11ರಂದು ಶನಿವಾರ ಬೆಳಗ್ಗೆ 9:30 ರಿಂದ ಸಂಜೆ 5:30ರ ವರೆಗೆ ಬೋಳೂರಿನ ಜಾರಂದಾಯ ದೈವಸ್ಥಾನದ ಹತ್ತಿರ ಇರುವ ಕೆರೋಕೆ ಕ್ಲಬ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಮೀರಾ ಪಡಿಯಾರ್ ಅವರ ಸಾರಥ್ಯದ “ನಾದಸಂಗಮ” ಸಂಸ್ಥೆಯು ಸತತವಾಗಿ, ಸಂಗೀತಾಸಕ್ತರಿಗಾಗಿ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಖ್ಯಾತ ಗಾಯಕ ಎಸ್ಪಿಬಿ ಅವರ ಪುಣ್ಯ ಸ್ಮರಣೆಯಂದು ಸತತ 12 ಗಂಟೆಗಳ ಕಾಲ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿತ್ತು. ಆನಂತರದ ದಿನಗಳಲ್ಲಿ ಪಿಬಿ ಶ್ರೀನಿವಾಸ್-ರಾಜಕುಮಾರ್ ಜೋಡಿಯ ವಿಶೇಷ ಹಾಡುಗಳ ಗಾಯನ ಕಾರ್ಯಕ್ರಮವನ್ನು ವಿವಿಧ ಗಾಯಕರ ಮೂಲಕ ನೆನಪಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಗಳ ಯಶಸ್ಸಿನಿಂದ ಉತ್ತೇಜಿತರಾಗಿ ಪಿ ಸುಶೀಲ-ಎಸ್ ಜಾನಕಿ ಇವರಿಬ್ಬರ ಯಶಸ್ವಿ ಹಾಗೂ ಸುಮಧುರ ಹಾಡುಗಳನ್ನು ನೆನಪಿಸುವ ಮತ್ತೊಂದು ಸಂಗೀತಸಂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ತದನಂತರ ಮಹಿಳಾ ಗಾಯಕಿಯರಿಗೆಂದೇ ವಿಶೇಷವಾಗಿ ಒಂದು ಕೆರೋಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆನಂತರ ಕೇವಲ ಪುರುಷ ಹವ್ಯಾಸಿ ಗಾಯಕರಿಗಾಗಿಯೇ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು.


ಇದೀಗ ನಾದಸಂಗಮ ಸಂಸ್ಥೆಯು ಹಿರಿಯ ನಾಗರಿಕರಿಗಾಗಿ ಒಂದು ವಿಶೇಷವಾದ “ಹಾಡಾಡೋಣ ಬನ್ನಿ” ಎಂಬ ಕೆರೋಕೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಒಟ್ಟು 50 ಜನ ಹಿರಿಯ ನಾಗರಿಕರು ಇದರಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಒಟ್ಟು 100 ಹಾಡುಗಳನ್ನು 50 ಮಂದಿ ಸದಸ್ಯರು ಹಾಡಲಿದ್ದಾರೆ.

error: Content is protected !!