
ಮಂಗಳೂರು: ನವೆಂಬರ್ 20ರಂದು ತುಳುನಾಡಿನಾದ್ಯಂತ ವಿಶಿಷ್ಟ ಕಥಾಹಂದರದ ‘ಬೆಲ್ಲದಗಟ್ಟಿ’ ತುಳು ಚಲನಚಿತ್ರ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ರಾಜ ಕಟಪಾಡಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಈ ಚಿತ್ರವು ಹೊರದೇಶಗಳಲ್ಲಿ ಪ್ರೀಮಿಯರ್ ಶೋಗಳನ್ನು ಕಂಡು ಅಲ್ಲಿನ ಕಲಾಭಿಮಾನಿಗಳ ಹಾರೈಕೆ ಹಾಗೂ ಪ್ರಶಂಸೆ ಪಡೆದಿದ್ದು ಇದರೊಂದಿಗೆ ಉಡುಪಿ, ಮಣಿಪಾಲ ಹಾಗೂ ಮಂಗಳೂರಿನಲ್ಲಿ ಪ್ರೀಮಿಯರ್ ಶೋಗಳ ಮೂಲಕ ಅದ್ದೂರಿಯಾಗಿ ಪ್ರದರ್ಶನಗೊಂಡು ಕಲಾಭಿಮಾನಿಗಳ ಜನಮನ್ನಣೆ ಗಳಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.

ಉದಯೋನ್ಮುಖ ನಟ, ನಿರ್ದೇಶಕ ರಾಜಾ ಕಟಪಾಡಿ ಅವರ ಸಾರಥ್ಯದಲ್ಲಿ ಕಟೀಲ್ ಪ್ರಸಾದ್ ಪ್ರೊಡಕ್ಷನ್ಸ್ ಕಟಪಾಡಿ ಲಾಂಛನದಲ್ಲಿ ತುಳುವಿನಲ್ಲಿ ನಿರ್ಮಾಣಗೊಂಡ ಚಲನಚಿತ್ರದಲ್ಲಿ ಕೃಷಿ ಪ್ರಧಾನ ಕುಟುಂಬದ ಸಾಂಸಾರಿಕ ಜೀವನದ ಪರಿಕಲ್ಪನೆಯಲ್ಲಿ ಸಮಾಜದ ಹಿರಿಯರ ಆಚರಣೆಗಳು, ಕೃಷಿ ಚಟುವಟಿಕೆಗಳು, ದೈವಾರಾಧನೆ, ಕಟ್ಟುಪಾಡುಗಳು, ಪರಂಪರಾಗತ ಧಾರ್ಮಿಕ-ಜಾನಪದ ಆಚರಣೆಗಳು ಮತ್ತು ಪ್ರಾಮಾಣಿಕ ಶ್ರಮದಾಯಕ ಜೀವನಪದ್ಧತಿಯನ್ನು ಚಿತ್ರಿಸಲಾಗಿದೆ. ತಪ್ಪು ಕಲ್ಪನೆಯಿಂದ ದೈವದ ಮುಂದೆ ಪ್ರಮಾಣದಿಂದ ಆಗುವ ಕುಟುಂಬ ಘಟನೆಗಳು ಹಾಗೂ ಅದರ ಸುತ್ತಲೂ ಹೆಣೆದ ರೋಚಕ ಕಥೆ ಹಾಗೂ ತಾವು ಮಾಡಿದ ತಪ್ಪಿನ ಅರಿವಾಗಿ ತಪ್ಪು-ಸರಿಯ ನಡುವೆ ನಡೆಯುವ ಸಾಂಸಾರಿಕ ಜೀವನಮೌಲ್ಯಗಳೇ ಈ ಚಿತ್ರದ ಕಥಾಹಂದರವಾಗಿದೆ.
ರಾಮಕೃಷ್ಣ ಸುಜೀರ್ ಬಾರ್ದಿಲ ಇವರು ನಿರ್ಮಾಪಕರಾಗಿ ಚಲನಚಿತ್ರಕ್ಕೆ ಬಂಡವಾಳ ಹೂಡಿದ್ದು, ಜಗತ್ ರಾಜಪಾಲ್ ಬಿಕರ್ಣಕಟ್ಟೆ ಇವರ ಪ್ರೇರಣೆಯೊಂದಿಗೆ ಚಿತ್ರವು ನಿರ್ಮಾಣಗೊಂಡಿದೆ.
ಈ ಚೊಚ್ಚಲ ಚಿತ್ರದ ನಿರ್ದೇಶನ, ಕಥೆ ಹಾಗೂ ಸಂಭಾಷಣೆಯನ್ನು ರಾಜಾ ಕಟಪಾಡಿ ನಿರ್ವಹಿಸಿದ್ದಾರೆ. ಇವರು ಈ ಹಿಂದೆ ಸಾಕಷ್ಟು ಕಿರುಚಿತ್ರಗಳು ಹಾಗೂ ಹಾಡುಗಳನ್ನು ಯೂಟ್ಯೂಬ್ ಮೂಲಕ ನಿರ್ಮಿಸಿ ಮಿಲಿಯನ್ಗಟ್ಟಲೆ ವೀಮ್ಸ್ ಪಡೆದು ತಮ್ಮ ಕಲಾ ಸೌಂದರ್ಯ ಮತ್ತು ನಿರ್ದೇಶನದ ಛಾಪನ್ನು ಮೂಡಿಸಿದ್ದು, ಈ ಚಿತ್ರವು ಅವರ ಎಲ್ಲಾ ಕಲಾಕೃತಿಗಳಿಗೆ ಕಿರೀಟಪ್ರಾಯವಾಗಿದೆ. ಸಂಕಲನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ನಿರ್ವಹಿಸಿದ್ದಾರೆ, 5.1 ಲೋಯ್, ಮಂಗಳೂರು, ಸಂಗೀತ ನಿರ್ದೇಶನ ಸಂದೇಶ್ ಬಾಬಣ್ಣ, ಹಿನ್ನೆಲೆ ಗಾಯಕರು ಸಮನ್ವಿ ರೈ. ಪುತ್ತೂರು ಹಾಗೂ ಕೆ.ಪಿ ಮಿಲನ್.
ಈ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್ (CBFC) ಕಡೆಯಿಂದ “ಯು.ಎ” (U/A) ಪ್ರಮಾಣಪತ್ರ ದೊರೆತಿರುವುದು ಚಿತ್ರದ ಮತ್ತೊಂದು ಗೆಲುವಾಗಿದೆ.
ನವೆಂಬರ್ 20ರಂದು ಪೂರ್ವಾಹ್ನ ಗಂಟೆ 9.30ಕ್ಕೆ ಪ್ರದರ್ಶನ ಕಾರ್ಯಕ್ರಮವನ್ನು ಮಂಗಳೂರಿನ ಭಾರತ್ ಮಾಲ್ ನಲ್ಲಿರುವ ಭಾರತ್ ಸಿನಿಮಾ ಥಿಯೇಟರ್ ನಲ್ಲಿ ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನೆಯನ್ನು ಬ್ರಿಜೇಶ್ ಚೌಟ, ಸಂಸದರು, ವೇದವ್ಯಾಸ ಕಾಮತ್, ಶಾಸಕರು ಹಾಗೂ ಪದ್ಮರಾಜ್ ಆರ್. ಪೂಜಾರಿ, ಅಧ್ಯಕ್ಷರು, ದ.ಕ ಜಿಲ್ಲಾ ಕಾಂಗ್ರೆಸ್ ಇವರುಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡುವರು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮನೋಹರ್ ಶೆಟ್ಟಿ ನಂದಳಿಕೆ, ಸುಜಾತಾ ಶಕ್ತಿ ನಗರ, ವಿಜಿತ್ ಕೋಟ್ಯಾನ್, ಸುನಿಲ್ ನೆಲ್ಲಿಗುಡ್ಡೆ, ಕಿಶ್ಮಿತಾ ನವೀಶ್, ನಿತೇಶ್ ರಾಜ್, ಅಪೇಕ್ಷಾ ಶೆಟ್ಟಿ, ಸುಜಾತಾ ಶೆಟ್ಟಿ ಪೆರಿಂಜೆ, ಸೊಹಾನಾ ಶಂಕರ್, ಜಯಕರ್ ಕುಂದರ್, ದೀಕ್ಷಾ ಬ್ರಹ್ಮಾವರ, ಗುಣಪ್ರಸಾದ್, ಮಾ. ಕರಣ್, ಚೈತಾಲಿ ಶೇಟ್, ದೇಶ್ಯಾ ಮತ್ತಿತರ ಉದಯೋನ್ಮುಖ ಕಲಾವಿದರು ಅಭಿನಯಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಜಗತ್ ರಾಜ್ ಪಾಲ್ ಬಂಗೇರ ಬಿಕರ್ನಕಟ್ಟೆ, ನಿರ್ಮಾಪಕ ರಾಮಕೃಷ್ಣ ಸುಜಿರ್ ಬರ್ದಿಲ, ವಿಜಿತ್ ಕೋಟ್ಯಾನ್, ಬಾಲನಟ ಕರಣ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.