“ನನಗೆ ನನ್ನದೇ ಧರ್ಮದ ವ್ಯಕ್ತಿ ಬೆನ್ನಿಗೆ ಚೂರಿ ಹಾಕಿದರು” -ಮಾಜಿ ಶಾಸಕ ಬಾವಾ

ಸುರತ್ಕಲ್: ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ‌ ನೇತೃತ್ವದಲ್ಲಿ ಆಯೋಜಿಸಲಾಗಿರುವ ಎರಡನೇ‌ ದಿನದ ಫುಡ್ ಫೆಸ್ಟಿವಲ್ ಕಾರ್ಯಕ್ರಮವು ಚೊಕ್ಕಬೆಟ್ಟುವಿನಲ್ಲಿ ಶನಿವಾರ ರಾತ್ರಿ ನಡೆಯಿತು.

ಸಮಾರಂಭದಲ್ಲಿ ಮಾತನಾಡಿದ ಮೊಯ್ದೀನ್ ಬಾವಾ, ಶಾಸಕನಾದ ಬಳಿಕ ಸುರತ್ಕಲ್‌ನಿಂದ‌ರೈಲ್ವೇ ಸೇತುವೆ ವರೆಗೆ ರಸ್ತೆ ಅಗಲೀಕರಣ ಮಾಡಲಾಯಿತು. ಎಂ.ಆರ್.ಪಿ.ಎಲ್. ರಸ್ತೆಗೆ 62ಕೋಟಿ.ರೂ. ತಂದಿದ್ದರೂ ಆ ಬಳಿಕ ಬಂದ ಶಾಸಕರು ಅನುದಾನ ಕಡಿತಗೊಳಿಸಿ ಅವರಿಗೆ ಬೇಕಾದಂತೆ ಅನುದಾನವನ್ನು ಉಪಯೋಗಿಸಿಕೊಂಡರು. ಬಡವರಿಗಾಗಿ ಜನತಾ ಕಾಲನಿಯಲ್ಲಿ ನಿರ್ಮಿಸಲಾಗಿದ್ದ ವಸತಿ ಸಮುಚ್ಚಯಗಳು ಪಾಳುಬೀಳುವಂತಾಯಿತು. ನನ್ನ ಬಳಿಕದ ಶಾಸಕರಿಂದ ಸುರತ್ಕಲ್‌ನ ಅಭಿವೃದ್ಧಿ ನಡೆದೇ ಇಲ್ಲ‌ ಎಂದು ಶಾಸಕ ಭರತ್ ಶೆಟ್ಟಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಮಹಾಮಾರಿ ಕೋವಿಡ್ ಸಂದರ್ಭ ನನ್ನ ಕ್ಷೇತ್ರದ ಜನರಿಗೆ 4.5 ಕೋಟಿ ರೂ. ಮೌಲ್ಯದ ದಿನಸಿ ಸಾಮಗ್ರಿ ಸಹಿತ ಅಗತ್ಯ ವಸ್ತುಗಳನ್ನು ಪ್ರಾಮಾಣಿಕತೆಯಿಂದು ಒದಗಿಸಿದ್ದೇನೆ. 11ಕಡೆಗಳಲ್ಲಿ ವೈದ್ಯಕೀಯ ಕೇಂದ್ರಗಳನ್ನು ತೆರೆದು ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದೇನೆ ಎಂದರು.

ನಾನು ಮಂಗಳೂರು ಉತ್ತರ‌ ಕ್ಷೇತ್ರದ ಶಾಸಕನಾಗಿದ್ದ ಸಮಯದಲ್ಲಿ ರಾಜ್ಯದ ಯಾವೊಬ್ಬ ಶಾಸಕನೂ ಇದುವರೆಗೆ ತಾರದೇ ಇರುವಷ್ಟು‌ ಅನುದಾನಗಳು, ಹೊಸ ಹೊಸ ಯೋಜನೆಗಳನ್ನು ತಂದಿದ್ದೇನೆ. ಯಾವುದೋ ಒಂದು ಕೊಲೆಯ ವಿಚಾರವಾಗಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ ಕುತಂತ್ರದಿಂದ ನನ್ನನ್ನು ಸೋಲಿಸಲಾಯಿತು. ಎಲೆಕ್ಷನ್ ಟಿಕೆಟ್ ವಿಚಾರದಲ್ಲಿ ನನ್ನದೇ ಧರ್ಮದ ವ್ಯಕ್ತಿ ಬೆನ್ನಿಗೆ ಚೂರಿ ಹಾಕಿದರು. ಇದರಿಂದ ಟಿಕೆಟ್ ಕೈತಪ್ಪಿತು“ ಎಂದು ಬಾವಾ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಕ್ಷೇತ್ರದ ಜನ ನನ್ನೊಂದಿಗೆ ಇದ್ದಾರೆ. ನಾನು ಶಾಸಕನಾಗಬೇಕೆನ್ನುವ ಬಯಕೆಯನ್ನೂ ಹೊಂದಿದ್ದಾರೆ. ದೇವರ ಅನುಗ್ರಹ, ಮತದಾರರ ಆಶೀರ್ವಾದ ಇದ್ದರೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ನಿಂತು ಹೋಗಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ನಿಸಾರ್ ಕರಾವಳಿ, ಎಂ.ಎಸ್. ಜಲೀಲ್ ಮೊದಲಾದವರು ಉಪಸ್ಥಿತರಿದ್ದರು.‌ ಸಭಾಕಾರ್ಯಕ್ರಮದ ಬಳಿಕ ಸಂಗೀತ ರಸಮಂಜರಿ ಕಾರ್ಯಕ್ರಮ ಮುಂದುವರಿಯಿತು.

error: Content is protected !!