ಅಶೋಕನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ಲೋಕಾರ್ಪಣೆ

I

ಮಂಗಳೂರು: ನಗರದ ಅಶೋಕ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಶಾಖಾ ಗ್ರಂಥಾಲಯದ ಕಟ್ಟಡವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ನಗರ ಕೇಂದ್ರ ಗ್ರಂಥಾಲಯದ ಸದಸ್ಯ ಸುಬ್ರಹ್ಮಣ್ಯ ಶೆಣೈ ಅವರ ಅವಿರತ ಪ್ರಯತ್ನದ ಫಲವಾಗಿ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಗ್ರಂಥಾಲಯದ ಆರಂಭದ ದಿನಗಳಲ್ಲಿ ಜಾಗದ ಕೊರತೆಯಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಸೂಕ್ತ ಸ್ಥಳಾವಕಾಶಕ್ಕಾಗಿ ಸತತ ಪ್ರಯತ್ನ ನಡೆಸಲಾಗಿದ್ದು, 2019ರಿಂದ ಕೈಗೊಂಡ ಪ್ರಯತ್ನಕ್ಕೆ ಇದೀಗ ಫಲಶ್ರುತಿ ದೊರೆತಿದೆ ಎಂದರು.
ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕಾಗಿ ತಮ್ಮ ಸ್ವಂತ ನಿಧಿಯಿಂದ 15 ಲಕ್ಷ ರೂ. ಅನುದಾನ ನೀಡಲಾಗಿದ್ದು, ನಗರ ಗ್ರಂಥಾಲಯ ಪ್ರಾಧಿಕಾರದ ನಿಧಿಯಿಂದ 16 ಲಕ್ಷ ರೂ. ನೆರವು ಪಡೆದು ಮತ್ತೊಂದು ಕೊಠಡಿಯನ್ನು ನಿರ್ಮಿಸಲಾಗಿದೆ. ನೂತನ ಕಟ್ಟಡ ಲೋಕಾರ್ಪಣೆಗೊಂಡಿರುವುದು ಓದುಗರ ಜಯವಾಗಿದೆ. ಈ ಹಿಂದೆ ಸಣ್ಣ ಕೊಠಡಿಯಲ್ಲೇ ಪ್ರತಿನಿತ್ಯ ಸಾಕಷ್ಟು ಓದುಗರು ಜ್ಞಾನಾರ್ಜನೆ ಮಾಡುತ್ತಿದ್ದರು. ಇದೀಗ ನೂತನ ಕಟ್ಟಡದಿಂದ ಓದುಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಮತ್ತೊಂದು ಕೊಠಡಿ ನಿರ್ಮಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಸುಸಜ್ಜಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವಿದೆ. ಈ ಕಾರ್ಯಕ್ಕೂ ಮುಂದಿನ ದಿನಗಳಲ್ಲಿ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ಬಳಿಕ ಮಾತಾಡಿದ ಶಾಲೆಟ್ ಪಿಂಟೊ ಅವರು “ಬಾಲ್ಯದಲ್ಲಿ ಓದುವ ಹುಚ್ಚು ಹೆಚ್ಚಿತ್ತು ಅದಕ್ಕಾಗಿ ಗ್ರಂಥಾಲಯದಲ್ಲಿ ಸಿಗುವ ಪುಸ್ತಕ ಪಡೆದುಕೊಂಡು ಓದುತ್ತಿದ್ದೆ ಪುಸ್ತಕ ಮರಳಿಸುವಾಗ ಸ್ವಲ್ಪ ವಿಳಂಬವಾದರೂ ಅದಕ್ಕೆ ದಂಡ ತೆರಬೇಕಿತ್ತು. ಈಗ ಓದಲು ಸಾಕಷ್ಟು ಅವಕಾಶ ಇದ್ದರೂ ಓದುವವರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿನ ಗ್ರಂಥಾಲಯ ಸದ್ಬಳಕೆಯಾಗಲಿ” ಎಂದರು.
ಕಾರ್ಯಕ್ರಮದಲ್ಲಿ ಜಯಲಕ್ಷ್ಮೀ, ಗಣೇಶ್ ಕುಲಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

error: Content is protected !!