
ಮಂಗಳೂರು: ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್(78) ಇಂದು (ಜೂ.23) ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ಸಮಯ ದಿಂದ ಅನಾರೋಗಕ್ಕೀಡಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಅವರು ತಮ್ಮ ಜೀವನವನ್ನೇ ದೀನ್ ಸೇವೆಗೆ ಮುಡಿಪಾಗಿಟ್ಟಿದ್ದರು. ಇಸ್ಲಾಮಿನ ಸಂದೇಶವನ್ನು ಜನರಿಗೆ ತಲುಪಿಸುವುದು, ಧಾರ್ಮಿಕ ಶಿಕ್ಷಣದ ಬೆಳವಣಿಗೆಗೆ ಶ್ರಮಿಸುವುದು ಹಾಗೂ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದು ಅವರ ಬದುಕಿನ ಧ್ಯೇಯವಾಗಿತ್ತು. ಪಾಂಡಿತ್ಯ, ವಿನಯಶೀಲತೆ, ಸರಳತೆ ಮತ್ತು ತಕ್ವಾದಿಂದ ಕೂಡಿದ ಅವರ ವ್ಯಕ್ತಿತ್ವ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಅವರು ಅನೇಕ ಮಹತ್ವದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಯಾಗಿ ಸಮಾಜದ ವಿವಿಧ ಸಮಸ್ಯೆಗಳಿಗೆ ಇಸ್ಲಾಮಿನ ಬೆಳಕಿನಲ್ಲಿ ಪರಿಹಾರ ಸೂಚಿಸಿ ಜನರ ವಿಶ್ವಾಸವನ್ನು ಗಳಿಸಿದ್ದರು. ಮಸೀದಿಗಳು, ಮದರಸಾಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಮೂಲ್ಯವಾಗಿತ್ತು.