ಆ.13ರಂದು ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಮಂಗಳೂರು: ಕಳೆದ ಮೇ 22ರಂದು ರಾಜ್ಯ ಕಾರ್ಮಿಕ ಇಲಾಖೆ ವಿವಿಧ ಉದ್ಯೋಗಗಳ ಕನಿಷ್ಠ ವೇತನ ನಿಗದಿಪಡಿಸಿ ಆದೇಶ ಹೊರಡಿಸಿದರೂ ಈವರೆಗೂ ಕನಿಷ್ಟ ವೇತನ ಜಾರಿಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಆಗಸ್ಟ್ 13 ರಂದು ರಾಜ್ಯದ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರ ಆಗ್ರಹ ಸಮಾವೇಶವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ ಎಂದು ಎಂ.ಬಿ.ನಾಗಣ್ಣ ಗೌಡ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


ಕಳೆದ ಹತ್ತು ವರ್ಷಗಳಿಂದ ವಿವಿಧ ಉದ್ಯೋಗಗಳ ವೇತನವನ್ನು ಬೆಲೆ ಹೆಚ್ಚಳಕನುಗುಣವಾಗಿ ಏರಿಸಬೇಕಿತ್ತು. ಇದಕ್ಕಾಗಿ ಕಾರ್ಮಿಕ ಸಂಘಟನೆಗಳು ಸಾಕಷ್ಟು ಹೋರಾಟವನ್ನು ಸಹ ಮಾಡಿದ್ದವು.ಕಡೆಗೆ ನ್ಯಾಯಾಲಯದ ಮಧ್ಯಪ್ರವೇಶದೊಂದಿಗೆ ಶೇ 40 ರಷ್ಟು ವೇತನ ಹೆಚ್ಚಳಗೊಳಿಸಿ ರಾಜ್ಯ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಆದರೆ ಈ ನಡುವೆ ಖಾಸಗಿ ಉದ್ಯಮಿಗಳು ಕನಿಷ್ಟ ವೇತನ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ರಾಜ್ಯ ಸರ್ಕಾರ ಪರಿಷ್ಕೃತ ಕನಿಷ್ಟ ವೇತನ ಜಾರಿಗೆ ಇಚ್ಚಾಶಕ್ತಿ ತೋರುತ್ತಿಲ್ಲ.ಇಲಾಖೆಗಳ ಮುಖ್ಯಸ್ಥರು ಕನಿಷ್ಟ ವೇತನ ಜಾರಿ ಮಾಡುವ ಬದಲು ಸರಕಾರದಿಂದ ತಮಗೆ ಯಾವುದೆ ಸೂಚನೆ ಬಂದಿಲ್ಲವೆಂದು ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕ ಇಲಾಖೆ ಹೆಚ್ಚಾದ ಕನಿಷ್ಟ ವೇತನದ ಮಾಹಿತಿ ಒದಗಿಸುವುದಕ್ಕೆ ಸಿಮೀತವಾಗಿದೆಯೆ ವಿನಾ ಅಧಿಸೂಚನೆ ಜಾರಿಗೊಳಿಸುವ ಕೆಲಸ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರು ಕನಿಷ್ಟ ವೇತನ ಜಾರಿ ಆಗ್ರಹ ಸಮಾವೇಶವನ್ನು ಆಗಸ್ಟ್ 13 ರಂದು ಬೆಂಗಳೂರಿನಲ್ಲಿ ಆಯೋಜಿಸಲಿದ್ದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಕನಿಷ್ಟ ವೇತನ ಜಾರಿಗೆ ವ್ಯತಿರಿಕ್ತ ಆದೇಶ ಹೊರಬಿದ್ದಲ್ಲಿ ಅದರ ಸಂಪೂರ್ಣ ಹೊಣೆ ರಾಜ್ಯ ಸರಕಾರವೇ ಹೊರಬೇಕು.ಸರಕಾರಿ ಇಲಾಖೆಗಳ ಹೊರಗುತ್ತಿಗೆ ನೌಕರರಿಗೆ ಪರಿಷ್ಕೃತ ಕನಿಷ್ಟ ವೇತನ ಜಾರಿಗೊಳಿಸಲು ಕಾನೂನಿನ ಯಾವುದೆ ಅಡ್ಡಿಯಿಲ್ಲ.ಆದರೂ ಸರಕಾರ ವೇತನ ಜಾರಿಗೊಳಿಸದೆ ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ಕಾರ್ಮಿಕ ವಿರೋಧಿಯಾಗಿದೆ ಎಂದರು.

error: Content is protected !!