ಡೇವಿಡ್‌ ಡಿಸೋಜಾ ಹತ್ಯೆ: ಮೂವರು ಆರೋಪಿಗಳ ಬಂಧನ

ಉಡುಪಿ: ಶಿರ್ವ-ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್‌ ಡಿಸೋಜಾ (55) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪೊಲೀಸ್‌ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಗಳನ್ನು ಅಜಯ್ ರಸ್ತೋಗಿ, ರಾಜು, ಜಿಯಾಹುಲ್ ವಜುಲ್ ಶೇಖ್ ಎಂದು ಹೆಸರಿಸಲಾಗಿದೆ. ಆರೋಪಿಗಳು ಬೈಂದೂರು ಬಳಿಯ ಒತ್ತಿನೆಣೆ ಪರಿಸರದಲ್ಲಿ ಅಡಗಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು ಈ ವೇಳೆ ಆರೋಪಿಗಳು ಪ್ರತಿದಾಳಿಗೆ ಮುಂದಾಗಿದ್ದು ಪೊಲೀಸರು ಫೈರಿಂಗ್ ನಡೆಸಿ ವಶಕ್ಕೆ ಪಡೆದಿದ್ದಾರೆ.
ಆಗಸ್ಟ್‌ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಕಾಪು ತಾಲ್ಲೂಕಿನ ಮುದರಂಗಡಿಯ ಸೆಂಟ್‌ ಕ್ಷೇವಿಯರ್‌ ಚರ್ಚ್‌ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್‌ ಎಂಟರ್‌ಪ್ರೈಸಸ್‌ ಕಚೇರಿಗೆ ಬಂದಿದ್ದ ಡೇವಿಡ್‌ ಡಿಸೋಜಾ, ಬಳಿಕ ತಮ್ಮ ಥಾರ್‌ ವಾಹನದ ಚಾಲಕನ ಬದಿಯ ಬಾಗಿಲ ಬಳಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತಲೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಈ ಸಂಬಂಧ ಶಿರ್ವ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

error: Content is protected !!