ಆ.11: ಟೌನ್ ಹಾಲ್ ನಲ್ಲಿ ತುಳುನಾಟಕ ಕಲಾವಿದರ ಒಕ್ಕೂಟದಿಂದ ವಾರ್ಷಿಕ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರು-ತಂತ್ರಜ್ಞರಿಗೆ ಸನ್ಮಾನ!

ಮಂಗಳೂರು: 2003ರಲ್ಲಿ ಸ್ಥಾಪನೆಗೊಂಡ ತುಳುನಾಟಕ ಕಲಾವಿದರ ಒಕ್ಕೂಟವು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ 21ನೇ ವರ್ಷಕ್ಕೆ ಕಾಲಿರಿಸಿದೆ. ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರಿಗೆ, ತಂತ್ರಜ್ಞರಿಗೆ ಸನ್ಮಾನ, ಆರ್ಥಿಕವಾಗಿ ಅಶಕ್ತರಾಗಿರುವ ಕಲಾವಿದರಿಗೆ ಧನಸಹಾಯ ಮತ್ತು ತುಳುನಾಟಕ ರಂಗದಲ್ಲಿ ದುಡಿದು ಕೀರ್ತಿಶೇಷರಾದ ಹಿರಿಯ ಕಿರಿಯ ಕಲಾವಿದರ ಸಂಸ್ಮರಣೆಯ “ನೆಂಪು” ಕಾರ್ಯಕ್ರಮಗಳನ್ನು ಪ್ರತಿ ವರ್ಷವು ನಡೆಸಿಕೊಂಡು ಬಂದಿದೆ ಎಂದು ಪ್ರಧಾನ ಕಾರ್ಯದರ್ರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


2009ರಲ್ಲಿ ತುಳುನಾಟಕ ಕಲಾವಿದರ ಕ್ಷೇಮನಿಧಿಯೊಂದನ್ನು ಸ್ಥಾಪಿಸಿ, ಅದರ ಮೂಲಕ ಆರ್ಥಿಕವಾಗಿ ಅಶಕ್ತರಾಗಿರುವ ಕಲಾವಿದರಿಗೆ ಅವರ ಕಷ್ಟ ಕಾಲದಲ್ಲಿ ಸಹಾಯಹಸ್ತ ನೀಡುವ ಯೋಜನೆಯನ್ನೂ ಪ್ರಾರಂಭಿಸಿದಲ್ಲದೆ, ತುಳುನಾಟಕ ರಂಗದ ಕಲಾವಿದರಿಗೆ ಸಮೂಹ ವೈದ್ಯಕೀಯ ವಿಮೆಯನ್ನೂ ಕಾರ್ಯಗತಗೊಳಿಸಿ ಅದರಲ್ಲೂ ಆರ್ಥಿಕವಾಗಿ ಅಶಕ್ತರಾದ ಕಲಾವಿದರಿಗೆ ಈ ವೈದ್ಯಕೀಯ ಕ್ಷೇಮನಿಧಿಯಿಂದಲೇ ಅವರ ವಿಮಾ ಕಂತನ್ನು ಪಾವತಿಸುವ ಕ್ರಮವನ್ನೂ ಪ್ರಾರಂಭಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಕೊಡಮಾಡುವ ಕಲಾವಿದರ ಅಪಘಾತ ವಿಮಾ ಸೌಲಭ್ಯವನ್ನು ನಾಟಕ ಕಲಾವಿದರಿಗೂ ವಿಸ್ತರಿಸಿದ್ದು, ನಾಟಕ ರಂಗದ 600ಕ್ಕೂ ಮಿಕ್ಕಿ ಕಲಾವಿದರಿಗೆ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ. ತುಳುನಾಟಕ ರಂಗದ ಕಲಾವಿದರಾಗಿ ಸೇವೆ ಸಲ್ಲಿಸಿ ಕೀರ್ತಿಶೇಷರಾದ ಕಲಾವಿದರ ಹೆಸರಿನಲ್ಲಿ ಕಲಾವಿದರಿಗೆ ಸನ್ಮಾನ ಮಾಡಿ ಅವರ ಗೌರವ ಸ್ಮರಣೆ ಮಾಡುವ ಉದ್ದೇಶದಿಂದ ಅವರ ಕುಟುಂಬದ ಸದಸ್ಯರಿಂದ ಪ್ರಾಯೋಜಕತ್ವ ಪಡೆಯುವ ಯೋಜನೆ ಹಮ್ಮಿಕೊಂಡಿದ್ದು, ಈ ವರ್ಷದಿಂದ ಈ ಯೋಜನೆ ಕಾರ್ಯಗತಗೊಳ್ಳಲಿದೆ. 2026-27ನೇ ಸಾಲಿನ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರಿಗೆ, ತಂತ್ರಜ್ಞರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ನೆಂಪು ಕಾರ್ಯಕ್ರಮ ಹಾಗೂ ಅಶಕ್ತ ಕಲಾವಿದರಿಗೆ ಗೌರವಧನ ವಿತರಣಾ ಕಾರ್ಯಕ್ರಮಗಳು ದಿನಾಂಕ ಆ.11ರಂದು ಮಂಗಳವಾರ ಸಂಜೆ 5.00ರಿಂದ ಮಂಗಳೂರು ಪುರಭವನದಲ್ಲಿ ಜರಗಲಿದೆ ಎಂದರು.


2026-27ನೇ ಸಾಲಿನ ತೌಳವ ಪ್ರಶಸ್ತಿಯನ್ನು ತಮ್ಮ ಲಕ್ಷ್ಮಣ, ಹಿರಿಯ ನಾಟಕಕಾರ, ನಟ, ಕಲಾ ನಿರ್ದೇಶಕ, ಸಾಹಿತಿ ಇವರಿಗೆ ಪ್ರದಾನಿಸಿ ಪುರಸ್ಕರಿಸಲಾಗುವುದು. ತುಳು ನಾಟಕ ರಂಗದ ಹಿರಿಯ ಕಲಾವಿದರಾದ ತಿಮ್ಮಪ್ಪ ಶೆಟ್ಟಿ ಬೋಳಾರ, ದಿನೇಶ್ ಮಾಸ್ಟರ್ ಬಿಜೈ, ನಾಗೇಶ ಸಾಲಿಯಾನ್ ಕಂಕನಾಡಿ, ಉಲ್ಲಾಸ್ ಕದ್ರಿ, ವಿಶ್ವನಾಥ ಚಿತ್ರಾಪುರ, ಸುಜಾತ ಶಕ್ತಿನಗರ ಇವರುಗಳನ್ನು ಸನ್ಮಾನಿಸಲಾಗುವುದು.
ನೆಂಪು ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ದಿ| ಬಾಬು ಭಟ್, ಶರವು, ದಿ। ದಯಾನಂದ ಶರವು, ದಿ| ವಿ.ಜಿ. ಪಾಲ್ ಬೊಕ್ಕಪಟ್ಣ, ದಿ। ಜೆ. ಸಸೀತಾರಾಮ ಶೆಟ್ಟಿ ಪಚ್ಚನಾಡಿ ಇವರುಗಳನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ಇವರಿಂದ “ವೈರಲ್ ವೈಶಾಲಿ” ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಕೋಶಾಧಿಕಾರಿ ಮೋಹನ ಕೊಪ್ಪಲ, ಉಪಾಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!