ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಹುದ್ದೆ-ಸಂಪುಟದಲ್ಲಿ ಸಿಂಹಪಾಲು; ಡಿಕೆಶಿ ಸರ್ಕಾರದಲ್ಲಿ ಮೈನಾರಿಟಿ ಕಾರ್ಡ್ ಪ್ಲೇ ಮಾಡಿದ ಹೈಕಮಾಂಡ್!

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇರ ನಾಯಕತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಅಲ್ಪಸಂಖ್ಯಾತ (ಮೈನಾರಿಟಿ) ಸಮುದಾಯವನ್ನು ಓಲೈಸಲು ಅತ್ಯಂತ ಪ್ರಮುಖ ಹಾಗೂ ತಂತ್ರಾತ್ಮಕ ಹೆಜ್ಜೆಯೊಂದನ್ನು ಇಟ್ಟಿದೆ.

ರಾಜ್ಯದ ಪ್ರಬಲ ಹಿಂದುಳಿದ ವರ್ಗದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದರಿಂದ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಧಕ್ಕೆಯಾಗಬಹುದು ಎಂದು ಅರಿತಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಹೊಸ ಸರ್ಕಾರದಲ್ಲಿ ಅಭೂತಪೂರ್ವ ಪ್ರಾತಿನಿಧ್ಯ ನೀಡಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ನೂತನ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಂಹಪಾಲು ನೀಡುವಂತೆ ಡಿಕೆಶಿಗೆ ಕಠಿಣ ನಿರ್ದೇಶನ ನೀಡಲಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.ತಮ್ಮ ಮಹತ್ವಾಕಾಂಕ್ಷೆಯ ‘ಸೋಷಿಯಲ್ ಜಸ್ಟಿಸ್’ (ಸಾಮಾಜಿಕ ನ್ಯಾಯ) ಸಿದ್ಧಾಂತಕ್ಕೆ ಯಾವುದೇ ಧಕ್ಕೆಯಾಗದಂತೆ ಹೊಸ ಸಚಿವ ಸಂಪುಟವನ್ನು ರೂಪಿಸಬೇಕು ಎಂದು ರಾಹುಲ್ ಗಾಂಧಿ ಅವರು ಡಿಕೆಶಿಗೆ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ ಒಬಿಸಿ ಸಮುದಾಯದಲ್ಲಿ ಉಂಟಾಗಬಹುದಾದ ಅಸಮಾಧಾನವನ್ನು ತಣ್ಣಗಾಗಿಸಲು ಹೊಸ ಸಂಪುಟದಲ್ಲಿ ದಲಿತರು, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಶಾಸಕರಿಗೆ ಸಿಂಹಪಾಲು ನೀಡಬೇಕು ಎಂದು ವರಿಷ್ಠರು ಕಡಕ್ ನಿರ್ದೇಶನ ನೀಡಿದ್ದಾರೆ.

ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ಇಬ್ಬರು ಉಪಮುಖ್ಯಮಂತ್ರಿಗಳ (DCM) ಪೈಕಿ ಒಂದು ಹುದ್ದೆಯನ್ನು ಕಡ್ಡಾಯವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಪಕ್ಷದ ಇತಿಹಾಸದಲ್ಲೇ ಇಷ್ಟು ಪ್ರಮುಖ ಅಧಿಕಾರವನ್ನು ಮೈನಾರಿಟಿ ಸಮುದಾಯಕ್ಕೆ ನೀಡುತ್ತಿರುವುದು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎಂದು ರಾಹುಲ್‌ಗಾಂಧಿಯ ಚಿಂತನೆ. ರಾಹುಲ್ ಗಾಂಧಿ ಅವರ ‘ಸಾಮಾಜಿಕ ನ್ಯಾಯ’ದ ಸಿದ್ಧಾಂತದ ಅಡಿಯಲ್ಲಿ, ಕೇವಲ ಸಾಂಕೇತಿಕವಾಗಿ ಸ್ಥಾನಗಳನ್ನು ನೀಡದೆ, ಸರ್ಕಾರದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಅಲ್ಪಸಂಖ್ಯಾತ ನಾಯಕರಿಗೆ ನೀಡಲು ವರಿಷ್ಠರು ಮುಂದಾಗಿದ್ದಾರೆ.

ಅಲ್ಪಸಂಖ್ಯಾತ, ಒಬಿಸಿ ಸಮುದಾಯಗಳು ಕಾಂಗ್ರೆಸ್‌ನ ಗಟ್ಟಿ ತಳಪಾಯವಾಗಿದ್ದು, ನಾಯಕತ್ವ ಬದಲಾವಣೆಯ ಪ್ರಕ್ರಿಯೆಯಲ್ಲಿ ಅವರಿಗೆ ಅನ್ಯಾಯವಾಗಿದೆ ಎಂಬ ಭಾವನೆ ಬರಬಾರದು ಎಂಬ ಕಾರಣಕ್ಕೆ ಹೊಸ ಸಂಪುಟದಲ್ಲಿ ಅಲ್ಪಸಂಖ್ಯಾತ ಸಚಿವರಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಮತ್ತೊಂದೆಡೆ, ಸಿದ್ದರಾಮಯ್ಯ ಬಣವನ್ನು ಸಮಾಧಾನಪಡಿಸಲು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತಿದೆ. 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಮತ್ತು ಸಮರ್ಥ ಅಲ್ಪಸಂಖ್ಯಾತ ಮುಖಗಳನ್ನು ಸಂಪುಟಕ್ಕೆ ತರಲು ರಾಹುಲ್ ಗಾಂಧಿ ಒಲವು ತೋರಿದ್ದಾರೆ.

error: Content is protected !!