ವಿಜಯಪುರ: ಶುಕ್ರವಾರ ಮಧ್ಯಾಹ್ನ ಎರಡು ಮುಕ್ಕಾಲು. ಸೂರ್ಯ ನೆತ್ತಿಯ ಮೇಲಿದ್ದ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಆ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಎಂದಿನಂತೆ ಕೆಲಸಗಳು ಸಾಗುತ್ತಿದ್ದವು. ಹಸಿರು ಪೈರಿನ ನಡುವೆ ಬೆವರು ಸುರಿಸುತ್ತಿದ್ದ ಆ ಜೀವಗಳಿಗೆ, ಕೇವಲ ಕೆಲವೇ ಕ್ಷಣಗಳಲ್ಲಿ ತಮ್ಮದೇ ನೆತ್ತರು ಆ ಮಣ್ಣಿಗೆ ಹರಿಯುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.

ಇದ್ದಕ್ಕಿದ್ದಂತೆ ಅಲ್ಲಿಗೆ ನುಗ್ಗಿದ್ದು ಒಂದಿಡೀ ರಕ್ಕಸರ ಹಿಂಡು! ಕೈಯಲ್ಲಿ ಮಚ್ಚು, ಲಾಂಗು, ಚಾಕುಗಳು ಸೂರ್ಯನ ಬಿಸಿಲಿಗೆ ಮಿನುಗುತ್ತಿದ್ದವು. ಕಣ್ಣುಗಳಲ್ಲಿ ರಕ್ತಪಿಪಾಸುತನವಿತ್ತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಆ ಮೃಗಗಳು ಮುಗಿಬಿದ್ದವು. ಮಚ್ಚುಗಳು ಗಾಳಿಯಲ್ಲಿ ಬೀಸಿದ ಸದ್ದಿಗೆ ಹಸಿರು ಹೊಲವೆಲ್ಲಾ ಕೆಂಪು ಬಣ್ಣಕ್ಕೆ ತಿರುಗಿತು. ತಪ್ಪಿಸಿಕೊಳ್ಳಲು ಓಡಿದವರನ್ನು ಬೆನ್ನಟ್ಟಿ ಬೆನ್ನಟ್ಟಿ ಕೊಚ್ಚಿ ಹಾಕಲಾಯಿತು. ಜೊತೆಗೆ ತೋಟದ ತುಂಬಾ ಗುಂಡಿನ ಸದ್ದೂ ಮೊಳಗಿತು. ಕೇವಲ ಕೆಲವೇ ನಿಮಿಷಗಳಲ್ಲಿ, ಆರು ಜೀವಗಳು ಪ್ರಾಣಪಕ್ಷಿ ಹಾರಿ ಹೆಣವಾಗಿ ಬಿದ್ದಿದ್ದವು! ಭೀಮಾತೀರದ ರಕ್ತಸಿಕ್ತ ಇತಿಹಾಸಕ್ಕೆ ಮತ್ತೊಂದು ಭೀಕರ ಹತ್ಯಾಕಾಂಡದ ಕಪ್ಪು ಚುಕ್ಕೆ ಬಿದ್ದಿತ್ತು.

.ಹಾಗಾದರೆ, ಈ ನರಮೇಧಕ್ಕೆ ಕಾರಣವೇನು? ಉತ್ತರ ಬೇರೇನೂ ಅಲ್ಲ… ಅದೇ ಹೆಣ್ಣು, ಹೊನ್ನು, ಮಣ್ಣು! ಹೌದು, ಇಲ್ಲಿ ಮಣ್ಣೇ ಮೃತ್ಯುವಾಗಿತ್ತು. ಗೋವಿಂದಪುರ ಗ್ರಾಮದ ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವೆ ದೀರ್ಘಕಾಲದಿಂದ ಜಮೀನಿನ ವ್ಯಾಜ್ಯವಿತ್ತು. ಕೋರ್ಟು, ಕಚೇರಿ, ಪಂಚಾಯಿತಿಗಳ ನಡುವೆ ನುಲಿಯುತ್ತಿದ್ದ ಆಕ್ರೋಶದ ಕಿಡಿ ಶುಕ್ರವಾರ ಧಗಧಗನೆ ಉರಿದು ಜ್ವಾಲೆಯಾಗಿದೆ. ಜಮೀನಿನ ಮೇಲಿನ ಹಕ್ಕಿಗಾಗಿ ಈ ಎರಡೂ ಕುಟುಂಬಗಳ ನಡುವೆ ಇದ್ದ ದ್ವೇಷದ ಒಲೆ ಕೊನೆಗೂ ಆರು ಜೀವಗಳನ್ನು ಬೇಯಿಸಿ ಹಾಕಿದೆ. ವಿವಾದಿತ ಜಮೀನಿಗಾಗಿ ಹೆಣ ಬೀಳಿಸಲು ಸ್ಕೆಚ್ ಹಾಕಿದ್ದ ಹಂತಕರು, ಸಮಯ ಸಾಧಿಸಿ ಈ ಭೀಕರ ಹತ್ಯಾಕಾಂಡವನ್ನು ನೆರವೇರಿಸಿದ್ದಾರೆ.

ಒಂದೇ ಕುಟುಂಬದ ಐವರ ಸಾವು!
ಈ ಭೀಕರ ರಕ್ತಪಾತದಲ್ಲಿ ಬಲಿಯಾದವರು ಚಡಚಣದ ನಿರಾಳೆ ಕುಟುಂಬದವರು. ಕೊಲೆಯಾದವರಲ್ಲಿ ಚಡಚಣ ಪಟ್ಟಣ ಪಂಚಾಯಿತಿಯ ಹಾಲಿ ಸದಸ್ಯ ಚೇತನ ನಿರಾಳೆ ಪ್ರಮುಖರು. ಇವರ ಜೊತೆಗೆ ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಮತ್ತು ಚಂದ್ರಶೇಖರ್ ನಿರಾಳೆ ಎಂಬ ಒಂದೇ ಕುಟುಂಬದ ಐವರು ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇಷ್ಟೇ ಅಲ್ಲದೆ, ಈ ಕುಟುಂಬದ ಆಪ್ತನಾಗಿದ್ದ ಶಬ್ಬಿರ್ ನದಾಫ್ ಎಂಬಾತ ಕೂಡ ಹಂತಕರ ಕ್ರೌರ್ಯಕ್ಕೆ ಬಲಿಯಾಗಿದ್ದಾನೆ. ಒಂದೇ ಹೊಲದಲ್ಲಿ ಸಾಲು ಸಾಲಾಗಿ ಬಿದ್ದ ಆರು ಹೆಣಗಳನ್ನು ಕಂಡು ಇಡೀ ವಿಜಯಪುರ ಜಿಲ್ಲೆಯೇ ಕಂಗೆಟ್ಟು ಹೋಗಿದೆ.

ಹಂತಕರ ಬೆನ್ನಟ್ಟಿದ ಪೊಲೀಸ್ ಪಡೆ!
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಭೀಮಾತೀರ ಹೈ ಅಲರ್ಟ್ ಆಗಿದೆ. ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಹಾಗೂ ವಿಜಯಪುರ ಎಸ್ಪಿ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳ ದಂಡೇ ಘಟನಾ ಸ್ಥಳಕ್ಕೆ ದೌಡಾಯಿಸಿದೆ. ರಕ್ತಸಿಕ್ತ ಜಮೀನನ್ನು ಪರಿಶೀಲಿಸಿದ ಐಜಿಪಿ ಸಂದೀಪ್ ಪಾಟೀಲ್, ಸದ್ಯ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಐಜಿಪಿ, “ನಮಗೆ ಆರೋಪಿಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿದೆ. ವಿಜಯಪುರ ಎಸ್ಪಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ಅತ್ಯಂತ ಶೀಘ್ರದಲ್ಲೇ ಕೊಲೆಗಡುಕರನ್ನು ಬೇಟೆಯಾಡಿ ಕಟಕಟೆಗೆ ನಿಲ್ಲಿಸುತ್ತೇವೆ” ಎಂದು ಖಡಕ್ ಆಗಿ ಹೇಳಿದ್ದಾರೆ.
ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ಸದ್ಯ ಭೀಮಾತೀರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಭೀತಿಯಲ್ಲಿದ್ದಾರೆ.