
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಫೈನಲ್ ಪ್ರವೇಶಿಸಿದ್ದು, ಭಾನುವಾರ ಫೈನಲ್ ಪಂದ್ಯಾಟ ನಡೆಯಲಿದೆ. ಪಂದ್ಯದ ಬಳಿಕ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಅತ್ಯಂತ ಕಠಿಣ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ಸಂಭ್ರಮಾಚರಣೆ ಮಾಡುವುದು, ರಸ್ತೆ ತಡೆದು ಬೈಕ್ ರ‍್ಯಾಲಿ ಅಥವಾ ಸ್ಟಂಟ್‌ಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ನಗರ ಪೊಲೀಸರು ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿ ಜನದಟ್ಟಣೆ ನಿರ್ವಹಿಸಲು ಮತ್ತು ಶಾಂತಿ ಕಾಪಾಡಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ ಸಂಚಾರ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೈಕ್ ಸ್ಟಂಟ್‌ಗಳು, ಅತಿ ವೇಗದ ಚಾಲನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಮಾಡಿ ಗಲಾಟೆ ಮಾಡುವುದು ಅಥವಾ ಇತರರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ತಂಡಗಳ ಅಭಿಮಾನಿಗಳನ್ನು ಅವಮಾನಿಸುವ ಅಥವಾ ಜಗಳಕ್ಕೆ ಪ್ರಚೋದನೆ ನೀಡುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


ಕಳೆದ ವರ್ಷ ನಡೆದ ಕಹಿ ಘಟನೆಯೇ ಪೊಲೀಸರು ಆರ್‌ಸಿಬಿ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಲು ಪ್ರಮುಖ ಕಾರಣವಾಗಿದೆ. ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆಯಿಂದಾಗಿ ಐಪಿಎಲ್ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಈ ಬಾರಿ ಅಂತಹ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಈ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
