ಅಮ್ಮನನ್ನು ಕಂಡು ಭಾವ ಪರವಶರಾದ ಸಾವಿರಾರು ಭಕ್ತರು!

ಮಂಗಳೂರು: ವಿನಯವೇ ಯಶಸ್ಸಿನ ಅಡಿಪಾಯ ಮತ್ತು ವಿನಯವಿರುವೆಡೆಯಲ್ಲಿ ಮಾತ್ರ ಜೀವನದ ನಿಜವಾದ ಸಾಫಲ್ಯ ಇದೆ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ನುಡಿದರು.


ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಂಗಳೂರು ಬ್ರಹ್ಮಸ್ಥಾನ ಮಹೋತ್ಸವ’ದ ಎರಡನೇ ದಿನದಂದು ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, “ಜೀವನವು ನದಿಯ ಹರಿವಿನಂತಿದ್ದು, ತನ್ನದೇ ಆದ ಏರಿಳಿತಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಅನುಭವಕ್ಕೂ ಒಂದು ಉದ್ದೇಶವಿರುತ್ತದೆ ಎಂಬುದನ್ನು ಒಪ್ಪಿಕೊಂಡು, ಶರಣಾಗತಿ ಭಾವನೆಯೊಂದಿಗೆ ನಾವೆಲ್ಲರೂ ಮುನ್ನಡೆಯಬೇಕು” ಎಂದು ಕರೆ ನೀಡಿದರು.

“ಮಣ್ಣಿನ ಅಡಿಯಲ್ಲಿ ಹೂತ ಬೀಜ ಮಾತ್ರವೇ ಮುಂದೆ ಹಣ್ಣು ಕೊಡುವ ಮರವಾಗಿ ಬೆಳೆಯಲು ಸಾಧ್ಯ. ಅದೇ ರೀತಿ, ವಿನಯವಿರುವೆಡೆಯಲ್ಲಿ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ” ಎಂದು ಅಮ್ಮ ಮಾರ್ಮಿಕವಾಗಿ ಹೇಳಿದರು.

ಬ್ರಹ್ಮಚಾರಿ ಡಾ. ಗಣೇಶ್ ಉಡುಪ ಇವರು ಪ್ರವಚನ ನೀಡಿದರು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಅಮ್ಮನವರು ವೇದಿಕೆಗೆ ಆಗಮಿಸಿದಾಗ, ಗಣ್ಯರು ಮಾಲೆಗಳನ್ನು ಅರ್ಪಿಸಿ ಅವರನ್ನು ಸ್ವಾಗತಿಸಿದರು. ಮಂಗಳೂರು ಚಿನ್ಮಯ ಮಿಷನ್‌ನ ಸ್ವಾಮಿ ಗಹನಾನಂದ, ಇಸ್ಕಾನ್ ಮುಖ್ಯಸ್ಥ ಪ್ರಭು ಗುಣಾಕರ ದಾಸ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಬಿ. ರವೀಂದ್ರ ಶೆಟ್ಟಿ, ಇಂದುಮತಿ ಮಲ್ಯ, ಎ.ಸಿ. ಕುಂದರ್, ಸಾಧು ಸಾಲ್ಯಾನ್, ವಿ.ಎಲ್. ರೇಗೋ ಮತ್ತು ಆತ್ಮಾರಾಮ್ ರೇವಣಕರ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಅಮ್ಮನವರಿಗೆ ಮಾಲಾರ್ಪಣೆ ಮಾಡಿದರು.


ವೇದಿಕೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್,
ಸೇವಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಡಾ.ವೈ.ಸನತ್ ಹೆಗಡೆ, ಸಿ ಎ ವಾಮನ್ ಕಾಮತ್, ಶ್ರುತಿ ಹೆಗಡೆ,ಡಾ ವಸಂತ್ ಕುಮಾರ್ ಪೆರ್ಲ, ದಿಲೀಪ್ ಕುಮಾರ್,ರಾಜನ್, ರೋಜಾ ರಾಜನ್,ಗಿರೀಶ್ ರೇವಣಕರ್ ಮೊದಲಾದವರು ಉಪಸ್ಥಿತರಿದ್ದರು
ಡಾ ದೇವದಾಸ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಅಮ್ಮನವರ ನೇತೃತ್ವದಲ್ಲಿ ಭಜನೆ ಮತ್ತು ಧ್ಯಾನ ನೆರವೇರಿತು. ವಿಶೇಷ ಪೂಜೆಗಳನ್ನೊಳಗೊಂಡ ಈ ಎರಡು ದಿನಗಳ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ‘ಅಮಲ ಭಾರತಂ’ ಅಭಿಯಾನದ ಅಂಗವಾಗಿ ಯಜ್ಞದ ವೇದಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು.
ಮೇ 31 ಮತ್ತು ಜೂನ್ 1 ರಂದು ಕೇರಳದ (ಕೋಝಿಕೋಡ್) ನಲ್ಲಿ ನಡೆಯಲಿರುವ ಎರಡು ದಿನಗಳ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಮ್ಮನವರು ಅಲ್ಲಿಗೆ ಪ್ರಯಾಣಿಸಲಿದ್ದಾರೆ.

error: Content is protected !!