ಸ್ಮಾರ್ಟ್‌ ಸಿಟಿ ಅವಾಂತರ! ಕುಂಟಿಕಾನ್-ಕೊಟ್ಟಾರ ಸರ್ವಿಸ್ ರಸ್ತೆ ಕುಸಿತ

ಮಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಕುಂಟಿಕಾನ್ ಜಂಕ್ಷನ್‌ನಿಂದ ಕೊಟ್ಟಾರ ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಚರಂಡಿ ಮೇಲಿನ ಸಿಮೆಂಟ್ ಕಂಬಗಳು (Slabs) ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಸಾರ್ವಜನಿಕ ಸಂಚಾರಕ್ಕೆ ಭಾರಿ ಕಂಟಕ ಎದುರಾಗಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಪ್ರತಿದಿನ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಪ್ರಕಾರ, ಇಂದು ಮುಂಜಾನೆ ಈ ಸರ್ವಿಸ್ ರಸ್ತೆಯ ಚರಂಡಿ ಮೇಲಿನ ಸಿಮೆಂಟ್ ಕಂಬಗಳು ಸ್ವಲ್ಪ ಮಟ್ಟಿಗೆ ಕುಸಿಯಲು ಆರಂಭಿಸಿದ್ದವು. ಆದರೆ, ಮಧ್ಯಾಹ್ನದ ವೇಳೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ, ವಾಹನಗಳ ಸಂಚಾರದ ಒತ್ತಡಕ್ಕೆ ಸಿಮೆಂಟ್ ಕಂಬಗಳು ಸಂಪೂರ್ಣವಾಗಿ ಧರಾಶಾಹಿಯಾಗಿವೆ. ಇದರಿಂದಾಗಿ ರಸ್ತೆಯ ಮಧ್ಯದಲ್ಲೇ ಬೃಹತ್ ಕಂದಕ ಸೃಷ್ಟಿಯಾದಂತಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.

 

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಸರ್ವಿಸ್ ರಸ್ತೆಯಲ್ಲಿ ದಿನದ 24 ಗಂಟೆಯೂ ಭಾರಿ ವಾಹನ ಸಂಚಾರವಿರುತ್ತದೆ. ಸದ್ಯ ರಸ್ತೆ ಮಧ್ಯೆಯೇ ಚರಂಡಿ ತೆರೆದುಕೊಂಡಿರುವುದರಿಂದ, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಆಯತಪ್ಪಿ ಬೀಳುವ ಅಪಾಯ ಎದುರಿಸುತ್ತಿದ್ದಾರೆ. ರಾತ್ರಿಯ ವೇಳೆಯಂತೂ ಇಲ್ಲಿ ಅಪಾಯದ ತೀವ್ರತೆ ದುಪ್ಪಟ್ಟಾಗಲಿದ್ದು, ದೊಡ್ಡ ದುರಂತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ.

ಈ ಕೃತ್ಯದ ಕುರಿತು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ಮಹಾನಗರ ಪಾಲಿಕೆಯ ಅಧಿಕಾರಿಗಳಾಗಲಿ ಇನ್ನೂ ಯಾವುದೇ ಸುರಕ್ಷತಾ ಬ್ಯಾರಿಕೇಡ್ ಅಳವಡಿಸದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಅಧಿಕಾರಿಗಳು ದೊಡ್ಡ ಅಪಘಾತ ನಡೆದು ಜೀವಹಾನಿಯಾಗುವವರೆಗೆ ಕಾಯುತ್ತಿದ್ದಾರೆಯೇ?” ಎಂದು ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಪ್ರಶ್ನಿಸಿದ್ದಾರೆ.

ತಕ್ಷಣದ ಕ್ರಮಕ್ಕೆ ಆಗ್ರಹ:
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕೂರದೆ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಕ್ಷಣಕ್ಕೆ ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಕುಸಿದು ಬಿದ್ದಿರುವ ಸಿಮೆಂಟ್ ಸ್ಲ್ಯಾಬ್‌ಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವ ಮೂಲಕ ವಾಹನ ಸವಾರರ ಪ್ರಾಣ ಉಳಿಸಬೇಕು ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

error: Content is protected !!