ಮುಲ್ಕಿಯಲ್ಲಿ ರಾತ್ರೋರಾತ್ರಿ ಜೆಸಿಬಿ ಆರ್ಭಟ: ಯಾವುದೇ ಮುನ್ಸೂಚನೆ ನೀಡದೆ ವಿಜಯಾ ಬ್ಯಾಂಕ್ ಶಿಲ್ಪಿ ಸುಂದರರಾಮ್ ಶೆಟ್ಟಿ ಸ್ಮಾರಕ ನೆಲಸಮ!

ಮೂಲ್ಕಿ: ಕರಾವಳಿಯ ಬ್ಯಾಂಕಿಂಗ್ ಕ್ಷೇತ್ರದ ದೃಶ್ಯಾವಳಿಯನ್ನೇ ಬದಲಾಯಿಸಿದ ಮಹಾನ್ ಚೇತನ, ವಿಜಯಾ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಸ್ಮಾರಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜೆಸಿಬಿ ಬಳಸಿ ನೆಲಸಮಗೊಳಿಸಿದೆ. ಮುಲ್ಕಿಯ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇದ್ದ ಈ ಸ್ಮಾರಕವನ್ನು ಸರ್ವಿಸ್ ರಸ್ತೆ ನಿರ್ಮಾಣದ ಹೆಸರಿನಲ್ಲಿ ಧ್ವಂಸಗೊಳಿಸಲಾಗಿದ್ದು, ಇದು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೇ ಮುನ್ಸೂಚನೆ ಇಲ್ಲದೆ ಜೆಸಿಬಿ ಕಾರ್ಯಾಚರಣೆ!
ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಅಂತ್ಯಸಂಸ್ಕಾರ ನಡೆದ ಜಾಗದಲ್ಲೇ ಕರಾವಳಿಯ ಜನತೆ ಮತ್ತು ವಿಜಯಾ ಬ್ಯಾಂಕ್ ನೌಕರರು ಸೇರಿ ಅತ್ಯಂತ ಗೌರವದಿಂದ ಈ ಸ್ಮಾರಕವನ್ನು ನಿರ್ಮಿಸಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಅಥವಾ ಪರ್ಯಾಯ ವ್ಯವಸ್ಥೆ ಮಾಡದೆ ಏಕಪಕ್ಷೀಯವಾಗಿ ಜೆಸಿಬಿ ತಂದು ಸ್ಮಾರಕವನ್ನು ಧ್ವಂಸಗೊಳಿಸಿದ್ದಾರೆ. ಈ ನಡೆ ಕರಾವಳಿಯ ಜನಪ್ರಿಯ ಧುರೀಣನಿಗೆ ಮಾಡಿದ ಅಪಮಾನ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.

 

ಕರಾವಳಿ ಮೂಲದ ಹೆಮ್ಮೆಯ ʻವಿಜಯಾ ಬ್ಯಾಂಕ್’ ಅನ್ನು ಮತ್ತೊಂದು ಬ್ಯಾಂಕ್ ಜೊತೆ ವಿಲೀನಗೊಳಿಸಿದಾಗಲೇ ಕರಾವಳಿ ಜನರಿಗೆ ಭಾರಿ ನೋವಾಗಿತ್ತು. ಇದೀಗ ಆ ಬ್ಯಾಂಕ್ ಅನ್ನು ಕಟ್ಟಿ ಬೆಳೆಸಿದ ಮಹಾ ನಾಯಕನ ಸ್ಮಾರಕವನ್ನೇ ಧ್ವಂಸ ಮಾಡಿರುವುದು ಜನರ ಹಳೇ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ವಿಜಯಾ ಬ್ಯಾಂಕ್ ವಿಲೀನದ ವೇಳೆ ಮೌನಕ್ಕೆ ಶರಣಾಗಿದ್ದ ಕರಾವಳಿಯ ಸಂಸದರು ಮತ್ತು ಶಾಸಕರು, ಈಗ ಸ್ಮಾರಕ ಧ್ವಂಸವಾಗುವಾಗಲೂ ಮೂಕಪ್ರೇಕ್ಷಕರಾಗಿದ್ದಾರೆ ಎಂದು ಸಾರ್ವಜನಿಕರು ರಾಜಕಾರಣಿಗಳ ವೈಫಲ್ಯದ ವಿರುದ್ಧ ಚಾಟಿ ಬೀಸಿದ್ದಾರೆ.

ಸದ್ಯ ಈ ಘಟನೆ ಕರಾವಳಿಯಲ್ಲಿ ದೊಡ್ಡ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬಂಟ್ಸ್ ಸಮುದಾಯದ ಮುಖಂಡರು, ವಿವಿಧ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಹಾಗೂ ವಿಜಯಾ ಬ್ಯಾಂಕ್‌ನ ಮಾಜಿ ಉದ್ಯೋಗಿಗಳು ಒಟ್ಟಾಗಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

error: Content is protected !!