ಕಾಸರಗೋಡು: ಗಡಿನಾಡು ಕಾಸರಗೋಡು ಮತ್ತು ನೆರೆಯ ಕಣ್ಣೂರು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ನವವಿವಾಹಿತ ಯುವತಿಯರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಇಡೀ ಸಮಾಜವನ್ನೇ ನಡುಗಿಸುತ್ತಿವೆ. ಮದುವೆಯಾಗಿ ಕೇವಲ ಒಂದೂವರೆ ತಿಂಗಳಷ್ಟೇ ಕಳೆದಿದ್ದ ಕಾಸರಗೋಡಿನ ಖಾಸಗಿ ಆಸ್ಪತ್ರೆಯ ನರ್ಸ್ ಅಶ್ವತಿ (24) ಎಂಬುವವರು ಇಲಿ ಪಾಷಾಣ ಸೇವಿಸಿ ನಿಗೂಢವಾಗಿ ಸಾವನ್ನಪ್ಪಿದ್ದು, ಈ ಕರಾಳ ಸರಣಿಗೆ ಮತ್ತೊಂದು ಕೊಂಡಿ ಸೇರ್ಪಡೆಯಾಗಿದೆ.

ಕುಟ್ಟಿಕ್ಕೋಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆತ್ತೂರುಪಾರೆಯ ಅಶ್ವತಿ ಪಿ.ವಿ, ಕಾಸರಗೋಡಿನ ಕಾಮತ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಏಪ್ರಿಲ್ 5 ರಂದು ಅವರ ಆಪ್ತ ಸಂಬಂಧಿಯೂ ಆಗಿದ್ದ ರೂಪೇಶ್ ಎಂಬುವವರ ಜೊತೆ ಪ್ರೇಮವಿವಾಹಗಿದ್ದರು. ಆದರೆ ಮದುವೆಯಾಗಿ ಕೇವಲ ಒಂದೂವರೆ ತಿಂಗಳಾಗುವಷ್ಟರಲ್ಲೇ, ಮೇ 18 ರಂದು ಕಾಸರಗೋಡು ಪೇಟೆಯ ತಮ್ಮ ಮನೆಯಲ್ಲಿ ಅಶ್ವತಿ ಇಲಿ ಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಪರಿಯಾರಂನ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.
ಕಾಸರಗೋಡು ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕೌಟುಂಬಿಕ ಕಲಹ ಅಥವಾ ಮಾನಸಿಕ ಕಿರುಕುಳವೇ ಈ ಸಾವಿಗೆ ಕಾರಣವೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.


ಬೆಚ್ಚಿಬೀಳಿಸುತ್ತಿದೆ ವಿವಾಹಿತ ಮಹಿಳೆಯರ ಸರಣಿ ಸಾವು!
ಸಿನೇರಾ: ಬೆಳ್ಳೂರು ಗಡಿ ಪಂಚಾಯತ್‌ನ ಪಲ್ಲಪಾಡಿಯ ಸಿನೇರಾ (27) ಎಂಬ ವಿವಾಹಿತ ಮಹಿಳೆ ಬುಧವಾರವಷ್ಟೇ ಪತಿಯ ಮನೆಯ ಪಕ್ಕದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿ ಮತ್ತು ಆತನ ಮನೆಯವರು ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಫಾತಿಮತ್ ಸುಫೈದಾ: ಬದಿಯಡ್ಕ ಪಂಚಾಯತ್‌ನ ಫಾತಿಮತ್ ಸುಫೈದಾ (24) ಎಂಬ ಯುವತಿ, ಪತಿ ಮತ್ತು ಅತ್ತೆಯ ಕಣ್ಣೆದುರೇ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿನ್ನಾಭರಣ ಮತ್ತು ವರದಕ್ಷಿಣೆಗಾಗಿ ಆಕೆಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಆಕೆಯ ಕುಟುಂಬಸ್ಥರು ದೂರು ನೀಡಿದ್ದಾರೆ.
ನೃತ್ಯ ಶಿಕ್ಷಕಿ ಸಾಂದ್ರಾ ತಾರಾ: ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ಕೇವಲ 4 ತಿಂಗಳ ಹಿಂದೆ ನವವಧು ಪ್ರಸಿದ್ಧ ನೃತ್ಯ ಶಿಕ್ಷಕಿ ಸಾಂದ್ರಾ ತಾರಾ (22) ಎಂಬುವವರು ಗುರುವಾರ ಸಂಜೆ ಪತಿಯ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕಾಶ್ ಮೋಹನ್ ಎಂಬುವವರನ್ನು ಮದುವೆಯಾಗಿದ್ದ ಸಾಂದ್ರಾ, ಸ್ಥಳೀಯವಾಗಿ ಅತ್ಯಂತ ಜನಪ್ರಿಯ ನೃತ್ಯ ನಾಯಕಿಯಾಗಿದ್ದರು. ತಳಿಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.