
ಪಂಜ ಕೊಯಿಕುಡೆ ಇಲ್ಲಿನ ಪ್ರಸಿದ್ಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾದ ಶ್ರೀ ವಿಠೋಬ ಭಜನಾ ಮಂಡಳಿ ಪಂಜ ಕೊಯಿಕುಡೆ ಇದರ ಸದಸ್ಯರ ಹಾಗೂ ಊರಿನ ಮಾನವೀಯ ಮನಸ್ಸುಗಳ ಸಂಕಲ್ಪದಂತೆ ಹಮ್ಮಿಕೊಳ್ಳಲಾದ “ಶ್ರೀ ವಿಠೋಬ ಕ್ಷೇಮ ನಿಧಿ” ಸ್ಥಾಪನೆ ಮತ್ತು ಹಾರ್ಮೋನಿಯಂ ತರಗತಿಯ ಶುಭಾರಂಭ ಕಾರ್ಯಕ್ರಮವು ಜುಲೈ 12 ರ ಭಾನುವಾರದಂದು ಮಂದಿರದ ಶಾಂತಾರಾಮ ಶೆಟ್ಟಿ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಮಹಾಗಣಪತಿ ಮಂದಿರದ ಅರ್ಚಕರಾದ ಸುರೇಶ್ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಭಕ್ತಿಪೂರ್ವಕವಾಗಿ ಉದ್ಘಾಟಿಸಿ, ಸಂಸ್ಥೆಯ ಸತ್ಕಾರ್ಯಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀವಿಠೋಬ ಭಜನಾ ಮಂದಿರದ ಗೌರವಾಧ್ಯಕ್ಷರಾದ ಸದಾನಂದ ಎಮ್. ಶೆಟ್ಟಿ, ‘ಜನನಿ’ ಹೊಸಬೆಟ್ಟು ಇದರ ಸುಧಾಕರ್ ಎಸ್. ಪೂಂಜ, ಚಾಮುಂಡೇಶ್ವರಿ ಸನ್ನಿಧಿ ಪಂಜದ ಸೀತಾರಾಮ ಅಮೀನ್, ಶಿವಸಂಜೀವಿನಿ ಸುರ ಗಿರಿಯ ಅಧ್ಯಕ್ಷರಾದ ನವೀನ್ ಭಂಡಾರಿ, ಶ್ರೀ ಶನೈಶ್ಚರ ಮಂಡಳಿಯ ಅಧ್ಯಕ್ಷರಾದ ಸುರೇಶ್ ಪಂಜ, ಹಾಗೂ ಹಾರ್ಮೋನಿಯಂ ಶಿಕ್ಷಕರಾದ ದಿನೇಶ್ ಎರ್ಮಾಳು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ವಿಮೆಯ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಆರಂಭದಲ್ಲಿ ಶ್ರೀ ವಿಠೋಬ ಭಜನಾ ಮಂಡಳಿಯ ಅಧ್ಯಕ್ಷರಾದ ಭರತ್ ರಾಜ್ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ಗಣ್ಯರನ್ನು ಹಾಗೂ ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಭಜನಾ ಸಂಚಾಲಕರಾದ ಸತೀಶ್ ಎಂ. ಶೆಟ್ಟಿ ಬೈಲಗುತ್ತು ಅವರು ಕಾರ್ಯಕ್ರಮವನ್ನು ಅತ್ಯಂತ ಆಕರ್ಷಕವಾಗಿ ಮತ್ತು ವ್ಯವಸ್ಥಿತವಾಗಿ ನಿರೂಪಿಸಿದರು. ಮಂಡಳಿಯ ಕೋಶಾಧಿಕಾರಿಯಾದ ಪದ್ಮನಾಭ ಪೂಜಾರಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

ಮಂಡಳಿಯ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಊರಿನ ಸದ್ಭಕ್ತರು ಹಾಗೂ ಹಾರ್ಮೋನಿಯಂ ಕಲಿಯುವ ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಿವ ಸಂಜೀವಿನಿ ಸುರಗಿರಿಯ ಅಧ್ಯಕ್ಷರಾದ ನವೀನ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
