
ಬ್ಯಾಂಕಾಕ್: ಬ್ಯಾಂಕಾಕ್‌ನ ಉತ್ತರ ಭಾಗದಲ್ಲಿರುವ ನಾ ಲಾಡ್ ಪ್ರಾವೋ ಪಬ್‌ನಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಸುಕಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಕ್ಷಣಾರ್ಧದಲ್ಲ ಪಬ್ ಸಂಪೂರ್ಣ ಆವರಿಸಿದೆ. ಬಳಿಕ ಪಬ್ ತುಂಬೆಲ್ಲಾ ಹೊಗೆ ಮತ್ತು ಬೆಂಕಿ ಜ್ವಾಲೆಗಳಿಂದ ಆವರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಪಬ್‌ನ ಮುಂಭಾಗದಿಂದ ಭಾರೀ ಬೆಂಕಿ ಮತ್ತು ದಟ್ಟ ಕಪ್ಪು ಹೊಗೆ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಒಳಗಿದ್ದವರು ಜೀವ ಉಳಿಸಿಕೊಳ್ಳಲು ಆತಂಕದಿಂದ ಹೊರಗೆ ಓಡುತ್ತಿರುವುದು ಕೂಡ ಕಂಡು ಬಂದಿದೆ.

ಪಬ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಒಬ್ಬ ಸಂಗೀತಗಾರ ಹೇಳಿಕೆ ನೀಡಿ, ವೇದಿಕೆಯ ಸಮೀಪದ ವಿದ್ಯುತ್ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಹೊಗೆ ಕಾಣಿಸಿಕೊಂಡಿತ್ತು. ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡು, ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಪಬ್ ತುಂಬಿಕೊಂಡ ಕಾರಣ ಜನರು ಹೊರಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
