ಮಂಗಳೂರು: ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಳೈರು ಭಾಗದಲ್ಲಿ ಖಂಡಿಗೆ ನಂದಿನಿ ನದಿಗೆ ಖಾಸಗಿ ಅಸ್ಪತ್ರೆ ಮತ್ತು ಎಸ್ ಟಿ ಪಿ ಪ್ಲಾಂಟ್ ನಿಂದ ಕಲುಷಿತ ನೀರು ಬರುವುದರಿಂದ ಕುಡಿಯುವ ನೀರಿನ ಬಾವಿ ಕಲುಷಿತಗೊಂಡು ಕುಡಿಯಲು ನೀರಿಲ್ಲ ಕೃಷಿ ಮಾಡಲು ಸಾಧ್ಯವಿಲ್ಲ ಇಂತಹ ಸಂದಿಗ್ಧ ಪರಿಸ್ಥಿತಿ ಇರುವಾಗ ಚೇಳೈರು 1 ನೇ ವಿಭಾಗದ ನದಿಯಲ್ಲಿ ಮರಳು ಗಾರಿಕೆಗೆ ಗಣಿ ಇಲಾಖೆ ಅನುಮತಿ ನೀಡಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದರು. ಇಂದು ಚೇಳೈರು ಗ್ರಾಮ ಪಂಚಾಯತ್‌ನ ಸಭಾಭವನದಲ್ಲಿ ನಡೆದ ಗ್ರಾಮ ಪಂಚಾಯತ್ ನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಇಂತಹ ಘಟನೆ ನಡೆಯಿತು.

ಈಗಾಗಲೇ ಕುಡಿಯಲು ನೀರಿಲ್ಲದೆ ಜನ ಪರದಾಡುತ್ತಾ ಇದ್ದಾರೆ. ಇಂತಹ ಸಂದರ್ಭದಲ್ಲಿ ಈಗಾಗಲೇ ಈ ಹಿಂದಿನ ಗ್ರಾಮಸಭೆಯಲ್ಲಿ, ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನೀರ್ಣಯಿಸಿ ಮಾತ್ರವಲ್ಲದೆ ಖುದ್ದಾಗಿ ಜಿಲ್ಲಾಧಿಕಾರಿ, ಸಹಾಯಕ ಅಯುಕ್ತರು, ಗಣಿ ಇಲಾಖೆಗೆ ಮರಳುಗಾರಿಕೆಗೆ ಅನುಮತಿ ನೀಡಬಾರದಾಗಿ ಮನವಿ ನೀಡಿದರು. ಲಂಚದ ಆಸೆಗೆ ಹಾಗೂ ರಾಜಕೀಯ ಒತ್ತಡಕ್ಕೆ ಬಲಿಯಾಗಿ ಗಣಿ ಇಲಾಖೆ ಮರಳುಗಾರಿಕೆಗೆ ಅನುಮತಿ ನೀಡಿದ್ದು, ಹಾಗಾಗಿ ಗ್ರಾಮಸಭೆಗೆ ಎನು ಅಧಿಕಾರವಿದೆ, ಪಂಚಾಯತ್ ನಿರ್ಣಯಕ್ಕೆ ಏನು ಬೆಲೆಯಿದೆ. ಯಾವ ಪುರುಷಾರ್ಥಕ್ಕೆ ಗ್ರಾಮ ಸಭೆ ನಡೆಸುತ್ತೀರಿ ನಾವು ಗ್ರಾಮ ಸಭೆ ನಡೆಸಲು ಬಿಡುವುದಿಲ್ಲ. ಮರಳುಗಾರಿಕೆಗೆ ನೀಡಿದ ಅನುಮತಿಯನ್ನು ತಕ್ಷಣ ರದ್ದುಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಡಳಿತ ಅಧಿಕಾರಿ ಸುರೇಶ್ ಅಡಿಗ ಮಾತನಾಡಿ, ಈ ಬಗ್ಗೆ ಇವತ್ತಿನ ಗ್ರಾಮಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿ, ಸಹಾಯಕ ಅಯುಕ್ತರು, ಗಣಿ ಇಲಾಖೆಗೆ ಕಳುಹಿಸುವುದಾಗಿ ತಿಳಿಸಿದರು, ಗ್ರಾಮಸಭೆಯನ್ನು ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ನಂತರ ಗ್ರಾಮಸಭೆಯನ್ನು ಮುಂದುವರಿಸಲಾಯಿತು ಬಡಜನರಿಗೆ ಉಪಯೋಗ ಆಗುವ ಜಾಗ ರಿಜಿಸ್ಟರ್ ಮಾಡಲು ಪಂಚಾಯತ್‌ನಿಂದ ಈ ಮುಂಚೆ 9 ಮತ್ತು 11 ಸಿಗುತ್ತಿದ್ದು, ಈಗ ಸರಕಾರವು ಅದನ್ನು ಬಂದ್ ಮಾಡಿ ಹೊರಗಡೆ ಆಯ್ದ ಸೈಬರ್ ಕೇಂದ್ರಕ್ಕೆ ನೀಡಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಬಹಳ ಅನ್ಯಾಯವಾಗುತ್ತಿದೆ ಎರಡು ಕಡೆ ಹಣ ನೀಡುವ ಪರಿಸ್ಥಿತಿ ಇದೆ ಹಾಗೂ ಅಲೆದಾಡುವ ಸ್ಥಿತಿ ಒದಗಿದೆ ಇದನ್ನು ಸರಿ ಪಡಿಸಿ ಪಂಚಾಯತ್ ನಲ್ಲಿ 9 ಮತ್ತು11 ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಆಡಳಿತ ಅಧಿಕಾರಿ ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಚೇಳೈರು ಕೊಲ್ಯ ರಸ್ತೆಯು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಲೇಔಟ್ ನಿಂದಾಗಿ ಸಂಪೂರ್ಣ ಹಾಳಾಗಿದ್ದು ಮೂಡಾಕ್ಕೆ ಎಷ್ಟು ಮನವಿ ಸಲ್ಲಿಸಿದರು ಪ್ರಯೋಜನವಾಗಲಿಲ್ಲ ಎಂದು ಮಾಜಿ ಪಂಚಾಯತ್ ಸದಸ್ಯರಾದ ಪ್ರತಿಮಾ ಶೆಟ್ಟಿ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಭಟ್ ಈ ಬಗ್ಗೆ ಮೂಡಾಕ್ಕೆ ಮನವಿ ನೀಡಲಾಗುವುದು ಎಂದರು. ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಚೇಳೈರು ಕೊಲ್ಯ ಎಂಬಲ್ಲಿ ತೆರೆದ ಬಾವಿ ರಚನೆ ಮಾಡಿದ್ದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಲಿಲ್ಲ ತಕ್ಷಣ ಸಂಪರ್ಕ ನೀಡಿ ಕುಡಿಯಲು ನೀರು ಕೊಡಿ ಎಂದು ಗ್ರಾಮಸ್ಥರು ಕೇಳಿಕೊಂಡರು.

ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಇದು ಪಂಚಾಯತ್ ಗೆ ಹಸ್ತಾಂತರ ಆಗಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಬೀದಿ ನಾಯಿಗಳ ಕಾಟ ಇದೆ. ಈ ಮೊದಲು ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಲಾಗುತ್ತಿತ್ತು, ಈಗ ಅದು ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಇದಕ್ಕೆ ಪಶು ಇಲಾಖೆಯ ಅಧಿಕಾರಿ ಉತ್ತರಿಸಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದರು ಮಧ್ಯ ಗ್ರಾಮದಲ್ಲಿ ಎಸ್ ಸಿ ಎಸ್ ಟಿ ಯವರಿಗೆ ಮೀಸಲಿಟ್ಟ 3-50 ಎಕ್ರೆ ಜಾಗಕ್ಕೆ ಸರಕಾರದಿಂದ ಸುಮಾರು 1 ಕೋಟಿ ಅನುದಾನ ಮಂಜೂರುಗೊಂಡಿದ್ದು, ಕಾಮಗಾರಿ ಪೂರ್ತಿ ಅಗಲಿಲ್ಲ ಇದಕ್ಕೆ ಸಂಬಂದಿಸಿದ ಇಲಾಖೆ ಸುಮ್ಮನಾಗಿದೆ. ದಯವಿಟ್ಟು ಬಡ ನಿವೇಶನ ರಹಿತರಿಗೆ ನಿವೇಶನ ನೀಡಿ ಅಲ್ಲದೆ ಇತರರಿಗೆ 8-60 ಎಕ್ರೆ ಜಾಗ ಇದ್ದು ಇದು ನಿವೇಶನಕ್ಕೆ ಮೀಸಲಿಟ್ಟ ಜಾಗವಾಗಿದ್ದು, ಪಂಚಾಯತ್ ಗೆ ಹಸ್ತಾಂತರ ವಾಗಿದ್ದು ತಕ್ಷಣ ಬಡವರ್ಗದವರಿಗೆ ನಿವೇಶನ ನೀಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಅಭಿವೃದ್ಧಿ ಅಧಿಕಾರಿ ಉತ್ತರಿಸಿ ಪರಿಶೀಲಿಸುವುದಾಗಿ ತಿಳಿಸಿದರು. ಚೇಳೈರು ಖಂಡಿಗೆ ನಂದಿನಿ ನದಿ ಕಲುಷಿತ ಗೊಂಡ ಬಗ್ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಮರಳುಗಾರಿಕೆಗೆ ಗಣಿ ಇಲಾಖೆ ಅನುಮತಿ ನೀಡಿದ್ದು ಅದನ್ನು ರದ್ದು ಪಡಿಸುವಂತೆ ಮನವಿ ನೀಡಿದರು ಇದಕ್ಕೆ ಜಿಲ್ಲಾಧಿಕಾರಿ ರದ್ದು ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಗ್ರಾಮ ಅಡಳಿತ ಅಧಿಕಾರಿ ಸುಲೋಚನಾ, ಪಂಚಾಯತ್ ಲೆಕ್ಕ ಸಹಾಯಕ ಸುರೇಶ್, ರಾಜೇಶ್ವರಿ, ವಿನಯ ಸಾಲ್ಯಾನ್, ಸಂತೋಷ್ ಶೆಟ್ಟಿ, ಮೋದಾಕ್ಷಿ, ಶಕೀಲಾ ಮುಂತಾದವರು ಉಪಸ್ಥಿತರಿದ್ದರು.