
ಮಂಗಳೂರು: ಎಂ.ಆರ್.ಪಿ.ಎಲ್ 4 ನೇ ಹಂತದ ಕುತ್ತೆತ್ತೂರು ಪೆರ್ಮುದೆ ತೆಂಕ ಎಕ್ಕಾರು ಭೂ ನಿರ್ವಸಿತರ ಪುನರ್ವಸತಿ ಸಭೆಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಸದರಾದ ಕ್ಯಾಪ್ಟನ್ ಬಿಜೇಶ್ ಚೌಟ ಮತ್ತು ಶಾಸಕರಾದ ಉಮಾನಾಥ ಕೋಟ್ಯಾನ್ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

4 ನೇ ಹಂತದ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿಯು ನಿರ್ವಸಿತ ಕುಟುಂಬದ 436 ಮಂದಿ ನಿರ್ವಸಿತ ಕುಟುಂಬಗಳ ಬಗ್ಗೆ ಕಳೆದ 10 ವರ್ಷಗಳಿಂದ ಪುನರ್ವಸತಿ ಮತ್ತು ಉದ್ಯೋಗದ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಸದ್ರಿ ಸಭೆಯಲ್ಲಿ ಮಾನ್ಯ ಸಂಸದರು ಮತ್ತು ಶಾಸಕರಿಂದ ಎಂ.ಆರ್.ಪಿ.ಎಲ್ ಸಂಸ್ಥೆಯ ಆಡಳಿತಕ್ಕೆ ತಾಕೀತು ಮಾಡಿತ್ತು. ಈ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್ ಎಂ.ಆರ್.ಪಿ.ಎಲ್ ವಿಸ್ತರಣೆಗಾಗಿ ಸ್ಥಳೀಯರು ಭೂಮಿಯನ್ನು ತ್ಯಾಗ ಮಾಡುತ್ತಿದ್ದು, ಅವರಿಗೆ ದೊರಕಬೇಕಾದ ಸವಲತ್ತುಗಳನ್ನು ಯಾವುದೇ ನಿರ್ಭಂದವಿಲ್ಲದೆ ಅಧಿಸೂಚನೆಗೆ ಮೊದಲು ಇದ್ದ ಎಲ್ಲಾ ಮನೆಗಳಿಗೆ ಸೂಕ್ತ ಪುನರ್ವಸತಿ ಮತ್ತು ಉದ್ಯೋಗವನ್ನು ವಿಳಂಬ ಮಾಡದೆ ಶೀಘ್ರವಾಗಿ ಕಲ್ಪಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಿ ನಡಾವಳಿ ರಚಿಸಿ ಸರಕಾರದ ಅದೇಶಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ಆದರೆ ಎಂ.ಆರ್.ಪಿ.ಎಲ್ ಸಂಸ್ಥೆ ಮಾನ್ಯ ಸಂಸದರ ಮತ್ತು ಶಾಸಕರ ಹಾಗೂ ಸಮಿತಿಯ ಗಮನಕ್ಕೆ ತಾರದೆ ತಮಗೆ ಸರಿಕಂಡಂತೆ ನಡಾವಳಿಯಲ್ಲಿ ತಿದ್ದುಪಡಿ ಮಾಡಿ ನಿಬಂಧನೆಗಳನ್ನು ಹಾಕಿ ಪರಿಷ್ಕೃತ ನಡಾವಳಿ ರಚಿಸಿ ಫಲಾನುಭವಿಗಳಿಗೆ ಮೋಸಮಾಡಿ ನಿರ್ವಸಿತ ಕುಟುಂಬಗಳಿಗೆ ಉದ್ಯೋಗ ಪುನರ್ ವಸತಿ ನೀಡಲು ಸೂಕ್ತ ದಾಖಲೆಗಳಿಲ್ಲ ಎಂಬ ಕುಂಟು ನೆಪ ಹೇಳಿ ಇದೀಗ 10 ವರ್ಷ ಕಳೆದರೂ ಸಮಯ ವಿಳಂಬ ಮಾಡಿ ನಿರ್ವಸಿತರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಮೊದಲೆ ಕೈಗೊಂಡ ನಡಾವಳಿಯನ್ನು ತಿದ್ದಿ ಯಾರಿಗೂ ತಿಳಿಸದೆ ಮಾಡಿರುವ ಪರಿಷ್ಕೃತ ನಡಾವಳಿಗಳ ಬಗ್ಗೆ ಸಂಸದರು ಮತ್ತು ಶಾಸಕರು ಆಕ್ಷೇಪ ಮಾಡಿದ್ದು, ಆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಾಗೂ ನಿರ್ವಸಿತರಿಗೆ ಶೀಘ್ರವಾಗಿ ನ್ಯಾಯ ಒದಗಿಸಿ ಕೊಡಬೇಕಾಗಿ ಸೂಚಿಸಿದರು. ಇದೇ ಸಂದರ್ಭದಲ್ಲಿ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಕಡೆಗಣಿಸಿ ನ್ಯಾಯಯುತವಾದ ಮೊದಲಿನ ನಡಾವಳಿಯಲ್ಲಿ ತಿಳಿಸಿದ ಹಾಗೆಯೇ ಎಲ್ಲರಿಗೂ ಉದ್ಯೋಗ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕಾಗಿ ಜಿಲ್ಲಾಧಿಕಾರಿಗಳಲ್ಲಿ ಸಮಿತಿಯವರು ಮನವಿ ಮಾಡಿದರು.

ಸಭೆಯಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ದರ್ಶನ್, ಎಂ.ಆರ್.ಪಿ.ಎಲ್ ಸಂಸ್ಥೆಯ ಅಡಳಿತ ನಿರ್ದೇಶಕ ಶ್ಯಾಮ್ ಕಾಮತ್, ಎಚ್ ಆರ್ ವಿಭಾಗದ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್, ವಿಶೇಷ ಭೂ ಸ್ವಾದೀನ ಅಧಿಕಾರಿಗಳು, ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಡೋನಿ ಸುವಾರಿಸ್, ಅಧ್ಯಕ್ಷ ಸುಧಾಕರ ಶೆಟ್ಟಿ ಕುತ್ತೆತ್ತೂರು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
