ಮಂಗಳೂರು: ಕಾರಾವಳಿ ಬ್ರಿಡ್ಜ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಮಾರ್ಜೊರಿ ಟಿಕ್ಸೇರಾ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವು ಜೂನ್ 4 ರಿಂದ ಜೂನ್ 13 ರವರೆಗೆ ಮಂಗಳೂರಿನ ಸೆಂಟ್ ಸೆಬಾಸ್ಟಿಯನ್ ಸೆಂಟೆನರಿ ಸಭಾಂಗಣದಲ್ಲಿ ಜರುಗಲಿದೆ ಎಂದರು. ಭಾರತೀಯ ಬ್ರಿಡ್ಜ್ ಫೆಡರೇಷನ್ (BFI) ಮತ್ತು ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ ಎಂದರು.

ಈ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾರತದಾದ್ಯಂತ ಹಾಗೂ ಪೋಲೆಂಡ್ ದೇಶದಿಂದ ವಿಶ್ವ ಚಾಂಪಿಯನ್ ಆಗಿರುವ ಬುರಾಸ್ ಕ್ರಿಸ್ಟೋಫ್ ಜರ್ಜಿ, ಡೊಮಿನಿಕ್ ಫಿಲೋಫೋವಿಚ್, ಜಾಕೋಬ್ ಪಾತೇಹುವಾ ಮತ್ತು ಪ್ಯಾಟ್ರಿಕ್ ಪಾತೇಹುವಾ ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಪ್ರಮುಖ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕ್ರೀಡಾಕೂಟವು ಮಂಗಳೂರನ್ನು ಭಾರತ ಮತ್ತು ವಿಶ್ವದ ಬ್ರಿಡ್ಜ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದೆ. ಮಂಗಳೂರಿನ ಉತ್ತಮ ವಿಮಾನ ಹಾಗೂ ರೈಲು ಪ್ರಯಾಣದ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಆತಿಥ್ಯ ಮತ್ತು ವೈವಿಧ್ಯಮಯ ಆಹಾರ ಪದ್ಧತಿಯನ್ನು ಪರಿಗಣಿಸಿ ಭಾರತೀಯ ಬ್ರಿಡ್ಜ್ ಫೆಡರೇಷನ್ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ಇಲ್ಲಿಯೇ ನಡೆಸಲು ಸೂಕ್ತ ಆಯ್ಕೆ ಮಾಡಿಕೊಂಡಿದೆ ಎಂದು ಅವರು ವಿವರಿಸಿದರು.

ಮನಸ್ಸಿನ ಆಟವಾಗಿರುವ (ಮೈಂಡ್ ಸ್ಪೋರ್ಟ್ಸ್) ʻಬ್ರಿಡ್ಜ್’ ಕ್ರೀಡೆಯನ್ನು ಮಂಗಳೂರಿನಲ್ಲಿ ಕಳೆದ 60 ವರ್ಷಗಳಿಂದ ಆಡಲಾಗುತ್ತಿದೆ. ಆದರೆ ಪ್ರಸ್ತುತ ತಲೆಮಾರಿನ ಯುವಕರು ಈ ಕ್ರೀಡೆಯನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರಿಸದ ಕಾರಣ, ಮಂಗಳೂರಿನಲ್ಲಿ ಇದರ ಆಟಗಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಆಟವು ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನ ಭಾಗವಾಗಿರುವುದರಿಂದ, ನಗರದ ಯುವಜನತೆ ಇದನ್ನು ಕಲಿಯಲು ಮತ್ತು ಆಡಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ ಎಂದು ನಂಬಿದ್ದೇನೆ” ಎಂದು ಮಾರ್ಜೊರಿ ಟಿಕ್ಸೇರಾ ಆಶಯ ವ್ಯಕ್ತಪಡಿಸಿದರು.

ಪಂದ್ಯಾವಳಿಯ ಯಶಸ್ಸಿಗಾಗಿ ಸಂಘಟನಾ ಕಾರ್ಯದರ್ಶಿ ಹಾಗೂ ಅಸೋಸಿಯೇಷನ್ ಉಪಾಧ್ಯಕ್ಷರಾದ ಡೆರೆಕ್ ರೇಗೊ ಅವರು ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಡೆರೆಕ್ ರೇಗೊ ಮತ್ತು ಖಜಾಂಚಿ ಪೀಟರ್ ಡಿಸೋಜ ಉಪಸ್ಥಿತರಿದ್ದರು.