ಮೇ 25ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆ? ತಳಮಟ್ಟದಲ್ಲಿ ವಿಜಯೇಂದ್ರ-ಅಶೋಕ್ ವಿರುದ್ಧ ಕಾರ್ಯಕರ್ತರ ಆಕ್ರೋಶದ ಬಿರುಗಾಳಿ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪ್ರತಿಪಕ್ಷ ಬಿಜೆಪಿಯ (BJP) ಆಂತರಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ, ಮೇ 25 ರ ನಂತರ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ನಾಯಕರು ಸಾಲು ಸಾಲಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ, ಬಹುದಿನಗಳಿಂದ ಚರ್ಚೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಗಳಿಗೆ ಶೀಘ್ರದಲ್ಲೇ ತೆರೆಬೀಳುವ ನಿರೀಕ್ಷೆ ಇದೆ. ಹೈಕಮಾಂಡ್ ಮೂಲಗಳ ಪ್ರಕಾರ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಬಿ. ವೈ. ವಿಜಯೇಂದ್ರ (BY Vijayendra) ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ, ಮೇಲ್ಮಟ್ಟದ ಈ ರಾಜಕೀಯ ಲೆಕ್ಕಾಚಾರಗಳಿಗೂ ಮತ್ತು ತಳಮಟ್ಟದ ಕಾರ್ಯಕರ್ತರ ಆಶಯಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು, ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಹೊಗೆಯಾಡುತ್ತಿದೆ.

ಮುಖ್ಯಾಂಶಗಳು
-ಬೆಂಗಳೂರಿಗೆ ರಾಷ್ಟ್ರೀಯ ನಾಯಕರ ದಂಡು: ಮೇ 23 ರಂದು ಪಕ್ಷದ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಮತ್ತು ಮೇ 25 ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

-ಕೋರ್ ಕಮಿಟಿ ಪುನಾರಚನೆ ಭೀತಿ: ಹಾಲಿ ಇರುವ ಇಬ್ಬರು ಪ್ರಮುಖ ಸದಸ್ಯರನ್ನು ಕೈಬಿಟ್ಟು ಜಗದೀಶ್ ಶೆಟ್ಟರ್, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಅಥವಾ ವಿ. ಸುನೀಲ್ ಕುಮಾರ್ ಅವರಿಗೆ ಮನ್ನಣೆ ನೀಡುವ ಸಾಧ್ಯತೆ.

-ಹೊಂದಾಣಿಕೆ ರಾಜಕಾರಣದ ಆರೋಪ: ಹಾಲಿ ನಾಯಕರಾದ ವಿಜಯೇಂದ್ರ ಹಾಗೂ ಆರ್‌ ಅಶೋಕ್ ವಿರುದ್ಧ ಕಾರ್ಯಕರ್ತರಲ್ಲಿ ತೀವ್ರ ನಿರಾಸಕ್ತಿ ಮತ್ತು ಆಕ್ರೋಶ.

-ಯತ್ನಾಳ್ ಪುನರ್ ಸೇರ್ಪಡೆಗೆ ಒತ್ತಾಯ: ಕಳೆಗುಂದಿದ ಪಕ್ಷಕ್ಕೆ ಜೀವ ತುಂಬಲು ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಾಪಸ್ ಕರೆತರಲು ಕಾರ್ಯಕರ್ತರ ಪಟ್ಟು.

ಹೈಕಮಾಂಡ್ ಲೆಕ್ಕಾಚಾರ ಮತ್ತು ಬಿಎಸ್‌ವೈ ಶಕ್ತಿ ಪ್ರದರ್ಶನ
ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಬಿ. ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನದ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಇಡೀ ರಾಜ್ಯದ ಮಠಾಧಿಪತಿಗಳು ಒಂದೇ ವೇದಿಕೆಗೆ ಬರಲು ಬಿಎಸ್​ವೈ ಅವರೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದರು. ಈ ಅಭೂತಪೂರ್ವ ಯಶಸ್ಸಿನ ಬಳಿಕ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಜೊತೆಗೆ ಸಂಘ ಪರಿವಾರದಲ್ಲೂ (RSS) ಸಾಫ್ಟ್ ಕಾರ್ನರ್ ಮೂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಚಿತ್ರದುರ್ಗದ ಸಮಾವೇಶ ಪರೋಕ್ಷವಾಗಿ ಯಡಿಯೂರಪ್ಪ ಅವರ ಭಾರಿ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ, ಪ್ರಮುಖ ನಿರ್ಣಾಯಕ ಸಮಿತಿಯಾದ ಕೋರ್ ಕಮಿಟಿ ಸೇರಲು ಬಿಜೆಪಿಯ ಹಿರಿಯ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ವಿಜಯೇಂದ್ರ-ಅಶೋಕ್ ಜೋಡಿ ವಿರುದ್ಧ ಕಾರ್ಯಕರ್ತರ ಆಸಕ್ತಿ ಶೂನ್ಯ!
ಮೇಲ್ಮಟ್ಟದಲ್ಲಿ ಹೈಕಮಾಂಡ್ ಮತ್ತು ಯಡಿಯೂರಪ್ಪ ಅವರ ಕುಟುಂಬ ರಾಜಕೀಯ ಭದ್ರವಾಗುತ್ತಿರುವಂತೆ ಕಂಡರೂ, ವಾಸ್ತವದಲ್ಲಿ ರಾಜ್ಯದ ಸಾಮಾನ್ಯ ಬಿಜೆಪಿ ಕಾರ್ಯಕರ್ತರು ತೀವ್ರ ಹತಾಶೆಗೆ ಒಳಗಾಗಿದ್ದಾರೆ. ಪ್ರಸ್ತುತ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನಾಯಕತ್ವದ ಬಗ್ಗೆ ಕಾರ್ಯಕರ್ತರಲ್ಲಿ ಕಿಂಚಿತ್ತೂ ಆಸಕ್ತಿ ಉಳಿದಿಲ್ಲ.

ಉಪಚುನಾವಣೆಯ ಹೀನಾಯ ಸೋಲು:
ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಮತ್ತು ಬಿಜೆಪಿಯ ಭದ್ರಕೋಟೆಯಾಗಿದ್ದ ಸ್ಥಾನಗಳನ್ನೂ ಗೆಲ್ಲಲು ಈ ಇಬ್ಬರು ನಾಯಕರಿಗೆ ಸಾಧ್ಯವಾಗಿಲ್ಲ. ಇದು ಅವರ ನಾಯಕತ್ವದ ವಿಫಲತೆಗೆ ಹಿಡಿದ ಕನ್ನಡಿಯಾಗಿದೆ.

ಕಾಂಗ್ರೆಸ್ ಜೊತೆ ‘ಹೊಂದಾಣಿಕೆ’ ರಾಜಕಾರಣ?
ರಾಜ್ಯ ಸರ್ಕಾರದ ಹಗರಣಗಳು ಮತ್ತು ಹಿಂದೂ ವಿರೋಧಿ ಧೋರಣೆಗಳನ್ನು ಕಟುವಾಗಿ ಖಂಡಿಸುವ ಛಾತಿಯನ್ನು ರಾಜ್ಯ ಬಿಜೆಪಿ ತೋರುತ್ತಿಲ್ಲ. ವಿರೋಧ ಪಕ್ಷವಾಗಿ ಸದನದಲ್ಲಾಗಲಿ, ರಸ್ತೆಯಲ್ಲಾಗಲಿ ಉಗ್ರ ಹೋರಾಟ ರೂಪಿಸುವಲ್ಲಿ ವಿಜಯೇಂದ್ರ ಮತ್ತು ಅಶೋಕ್ ವಿಫಲರಾಗಿದ್ದಾರೆ. ಇದು ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದೊಂದಿಗೆ ಇವರು ಮಾಡುತ್ತಿರುವ “ಹೊಂದಾಣಿಕೆ ರಾಜಕಾರಣ” (Adjustment Politics) ಎಂಬ ಅನುಮಾನವನ್ನು ಕಾರ್ಯಕರ್ತರಲ್ಲಿ ಬಲಪಡಿಸಿದೆ.

ಕಾರ್ಯಕರ್ತರಿಂದ ದೂರವಾದ ಅಧ್ಯಕ್ಷ:
ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಿರಂತರವಾಗಿ ರಾಜ್ಯ ಪ್ರವಾಸ ಮಾಡಿ, ಕಾರ್ಯಕರ್ತರನ್ನು ಖುದ್ದಾಗಿ ಭೇಟಿಯಾಗಿ ಸಂಘಟನೆಗೆ ಶಕ್ತಿ ತುಂಬುತ್ತಿದ್ದರು. ಆದರೆ ವಿಜಯೇಂದ್ರ ಅವರು ಕಾರ್ಯಕರ್ತರಿಂದ ಸಂಪೂರ್ಣ ದೂರವಾಗಿದ್ದಾರೆ, ಅವರನ್ನು ಭೇಟಿಯಾಗುತ್ತಿಲ್ಲ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸುವ ಯಾವುದೇ ಕೆಲಸ ರಾಜ್ಯ ನಾಯಕತ್ವದಿಂದ ಆಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಯತ್ನಾಳ್ ಆಗಮನದಿಂದ ಮಾತ್ರ ಪಕ್ಷಕ್ಕೆ ಮರುಜೀವ?
ರಾಜ್ಯ ಬಿಜೆಪಿಯಲ್ಲಿ ಈಗ ತಳಮಟ್ಟದಿಂದ ಕೇಳಿಬರುತ್ತಿರುವ ಏಕೈಕ ಒತ್ತಾಯವೆಂದರೆ ನಾಯಕತ್ವದ ಬದಲಾವಣೆ. ಕಳೆಗುಂದಿರುವ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಟ್ಟ ಹೋರಾಟ ಕಟ್ಟಬೇಕಾದರೆ, ಪ್ರಸ್ತುತ ಪಕ್ಷದಿಂದ ಉಚ್ಚಾಟನೆಗೊಂಡಿರುವ ಭಡಕಾಸ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತಕ್ಷಣವೇ ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಎಂಬುದು ಕಾರ್ಯಕರ್ತರ ಪಟ್ಟು.

ಹಿಂದುತ್ವದ ಅಜೆಂಡಾ ಮತ್ತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜಿ ಇಲ್ಲದೆ ಹೋರಾಡುವ ಯತ್ನಾಳ್ ಅವರಂತಹ ಹಿರಿಯ ನಾಯಕರಿಗೆ ಮರುಮನ್ನಣೆ ನೀಡಿ, ರಾಜ್ಯ ನಾಯಕತ್ವದಲ್ಲಿ ದೊಡ್ಡ ಬದಲಾವಣೆ ತಂದರೆ ಮಾತ್ರ ಬಿಜೆಪಿಗೆ ಭವಿಷ್ಯವಿದೆ ಎಂಬುದು ತಳಮಟ್ಟದ ಸ್ಪಷ್ಟ ಸಂದೇಶವಾಗಿದೆ. ಮೇ 25ರ ಕೋರ್ ಕಮಿಟಿ ಸಭೆಯಲ್ಲಿ ಹೈಕಮಾಂಡ್ ನಾಯಕರು ಕಾರ್ಯಕರ್ತರ ಈ ಆಕ್ರೋಶವನ್ನು ಪರಿಗಣಿಸುತ್ತಾರಾ ಅಥವಾ ಕುಟುಂಬ ರಾಜಕಾರಣಕ್ಕೆ ಮಣಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

error: Content is protected !!