
ಮಂಗಳೂರು: ರಸ್ತೆಯಲ್ಲಿ ಕಳೆದುಬಿದ್ದಿದ್ದ ನಗದು ಹಾಗೂ ಪ್ರಮುಖ ದಾಖಲೆಗಳಿದ್ದ ಪರ್ಸೊಂದನ್ನು ಅದರ ಅಸಲಿ ವಾರೀಸುದಾರರಿಗೆ ಸುರಕ್ಷಿತವಾಗಿ ಒಪ್ಪಿಸುವ ಮೂಲಕ ಆಟೋ ರಿಕ್ಷಾ ಚಾಲಕರೊಬ್ಬರು ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದ ಶ್ಲಾಘನೀಯ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಒಂದು ಕಾಲದಲ್ಲಿ ಕೋಮು ಸಂಘರ್ಷಗಳ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಕಲ್ಲಡ್ಕದಲ್ಲಿ, ಹಿಂದೂ ಯುವಕನೊಬ್ಬ ಮುಸ್ಲಿಂ ಯುವಕನಿಗೆ ಪರ್ಸ್ ಮರಳಿಸಲು ಸ್ಥಳೀಯ ಮಸೀದಿಯ ಮುಂಭಾಗವನ್ನೇ ಆಯ್ದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಕೋಮು ಸೌಹಾರ್ದತೆಗೆ ರಾಯಭಾರಿಯಂತಿದೆ.
ಉಪ್ಪಿನಂಗಡಿ ಸಮೀಪದ ಪೆರ್ನೆಯ ಪ್ರಸಿದ್ಧ ‘ಸತ್ಯಶ್ರೀ ಕ್ಯಾಟರಿಂಗ್’ ಮತ್ತು ‘ಮಾತೃಶ್ರೀ ಕ್ಯಾಟರಿಂಗ್’ ಮಾಲೀಕರ ಸಹೋದರರಾಗಿರುವ ಆಟೋ ಚಾಲಕ ರುದ್ರೇಶ್ ಪೆರ್ನೆ ಅವರು ತಮ್ಮ ವೈಯಕ್ತಿಕ ಕೆಲಸದ ನಿಮಿತ್ತ ಕಲ್ಲಡ್ಕಕ್ಕೆ ಬಂದಿದ್ದರು. ಈ ವೇಳೆ ಕಲ್ಲಡ್ಕ ಸರ್ವಿಸ್ ರಸ್ತೆಯಲ್ಲಿ ಅವರಿಗೆ ಪರ್ಸೊಂದು ಬಿದ್ದಿರುವುದು ಗಮನಕ್ಕೆ ಬಂದಿದೆ. ಅದನ್ನು ತೆಗೆದು ನೋಡಿದಾಗ ಅದರಲ್ಲಿ ನಗದು ಹಣ ಹಾಗೂ ಅತ್ಯಾವಶ್ಯಕ ದಾಖಲೆಗಳಿರುವುದು ಕಂಡುಬಂದಿದೆ

ಪರಿಶೀಲಿಸಿದಾಗ, ಆ ಪರ್ಸ್ ಪಾಣೆಮಂಗಳೂರು-ಮೆಲ್ಕಾರ್‌ನ ‘ಭಗವತಿ ಸ್ಟೀಲ್ಸ್’ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಹಫೀಜ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ರುದ್ರೇಶ್, ಪರ್ಸ್‌ನಲ್ಲಿದ್ದ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಹಫೀಜ್ ಅವರನ್ನು ಸಂಪರ್ಕಿಸಿದ್ದಾರೆ. ಬಳಿಕ ಕಲ್ಲಡ್ಕದ ಮಸೀದಿಯ ಬಳಿಗೆ ಬರಹೇಳಿ, ಹಫೀಜ್ ಅವರಿಗೆ ಸೇರಿದ ಸ್ವತ್ತನ್ನು ಯಥಾವತ್ತಾಗಿ ಹಸ್ತಾಂತರಿಸಿದ್ದಾರೆ.
ತಮ್ಮ ಕಳೆದುಹೋದ ದಾಖಲೆಗಳು ಮರಳಿ ಸಿಕ್ಕಿದ್ದಕ್ಕೆ ಹಫೀಜ್ ಆಟೋ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದು, ರುದ್ರೇಶ್ ಪೆರ್ನೆ ಅವರ ಈ ನಿಸ್ವಾರ್ಥ ನಡೆ ಮತ್ತು ಪ್ರಾಮಾಣಿಕ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
