
ಮಂಗಳೂರು: ದಿನಾಂಕ 29-06-2026 ರಂದು ನಸುಕಿನ ಜಾವ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸಂಭವಿಸಿದ ಭೀಕರ ಡಕಾಯಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ, ಕೃತ್ಯದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಹಾಗೂ ಆಶ್ರಯ ನೀಡಿದ ಇಬ್ಬರು ಸಹಚರರು ಸೇರಿದಂತೆ ಒಟ್ಟು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳದ ಕಣ್ಣೂರು ಮೂಲದ 37 ವರ್ಷ ಪ್ರಾಯದ ನಿಮಿಲ್ ಆರ್.ಕೆ., ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 40 ವರ್ಷ ಪ್ರಾಯದ ಇರ್ಷಾದ್ ಮತ್ತು 49 ವರ್ಷ ಪ್ರಾಯದ ಮುಸ್ತಾಫ ಎಂದು ಗುರುತಿಸಲಾಗಿದೆ. ಬಂಧಿತ ಮೂರೂ ಆರೋಪಿಗಳನ್ನು ಜುಲೈ 3 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ (KL-59-R-9450) ಬರುತ್ತಿದ್ದ 44 ವರ್ಷ ಪ್ರಾಯದ ವಿಕಾಸ್ ಸುಬ್ಬರಾವ್ ಧನವಡೆ ಎಂಬುವವರನ್ನು ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಜನ ಮುಸುಕುಧಾರಿ ದರೋಡೆಕೋರರು ಅಡ್ಡಗಟ್ಟಿದ್ದರು. ದೂರುದಾರರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ, ಅವರ ಪತ್ನಿ ಮತ್ತು ಮಗನನ್ನು ಅಪಹರಿಸಿ ಕೆಲವು ಕಿಲೋಮೀಟರ್ ದೂರದಲ್ಲಿ ಬಿಟ್ಟಿದ್ದರು. ಬಳಿಕ ದೂರುದಾರರ ಕಾರು, ಅದರಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ. ಮೌಲ್ಯದ 180 ಗ್ರಾಂ ಚಿನ್ನಾಭರಣ ಹಾಗೂ 2 ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 23,10,000 ರೂಪಾಯಿ ಮೌಲ್ಯದ ಸೊತ್ತನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಜೂನ್ 30 ರಂದು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದೆ ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟು ಹೋಗಿದ್ದ ದೂರುದಾರರ ಮಾರುತಿ ಡಿಝೈರ್ ಕಾರನ್ನು ಪತ್ತೆ ಹಚ್ಚಿ ಸ್ವಾಧೀನಪಡಿಸಿಕೊಂಡಿದ್ದರು.
ಮುಂದುವರಿದ ತನಿಖೆಯಲ್ಲಿ, ಜುಲೈ 2 ರಂದು ಕೃತ್ಯದ ಪ್ರಮುಖ ಆರೋಪಿ ನಿಮಿಲ್‌ನನ್ನು ಕೇರಳದ ಕಣ್ಣೂರು ಜಿಲ್ಲೆಯ ಚಾಲಾ ಎಂಬಲ್ಲಿನ ಆಸ್ಪತ್ರೆಯೊಂದರ ಬಳಿ ಪಣಂಬೂರು ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ವಶಕ್ಕೆ ಪಡೆದರು. ಅದೇ ದಿನ ಸಂಜೆ, ಆರೋಪಿಗಳಿಗೆ ಆಶ್ರಯ ನೀಡಿದ್ದ ಇರ್ಷಾದ್‌ನನ್ನು ಕೊಡಗಿನ ಪೊನ್ನಂಪೇಟೆಯಲ್ಲಿ ಹಾಗೂ ಪ್ರಮುಖ ಆರೋಪಿಗಳಿಗೆ ಕಾರು ಒದಗಿಸಿ ಆಶ್ರಯ ನೀಡಿದ್ದ ಮುಸ್ತಾಫನನ್ನು ಮಡಿಕೇರಿ ತಾಲೂಕಿನ ಮೂರ್ನಾಡು ಜಂಕ್ಷನ್ ಬಳಿ ಪಣಂಬೂರು ಪಿಎಸ್ಐ ಜ್ಞಾನ ಶೇಖರ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಿಂದ ಈ ದರೋಡೆ ಸಂಚಿನಲ್ಲಿ ಒಟ್ಟು 16 ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 14 ಮಂದಿ ನೇರವಾಗಿ ಕೃತ್ಯ ಎಸಗಿದ್ದರೆ, ಇಬ್ಬರು ಆಶ್ರಯ ನೀಡಲು ಸಹಕರಿಸಿದ್ದಾರೆ. ಸದ್ಯ ಬಂಧಿತರಿಂದ ದೂರುದಾರರ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಉಳಿದ 13 ಆರೋಪಿಗಳು, ಕೃತ್ಯಕ್ಕೆ ಬಳಸಿದ ಇನ್ನುಳಿದ 3 ಕಾರುಗಳು ಹಾಗೂ ದರೋಡೆಯಾದ ಚಿನ್ನಾಭರಣ, ಮೊಬೈಲ್ ಫೋನ್‌ಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಆರೋಪಿಗಳೆಲ್ಲರೂ ಮಡಿಕೇರಿ ಹಾಗೂ ಕೇರಳ ಮೂಲದವರೆಂದು ತಿಳಿದುಬಂದಿದೆ.

ಮಂಗಳೂರು ನಗರದ ಉತ್ತರ ವಿಭಾಗದ ACP ಶ್ರೀಕಾಂತ್ ಕೆ. ಹಾಗೂ ಸಿಸಿಬಿ ಘಟಕದ APC ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ, ಪಣಂಬೂರು ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, PSI ಗಳಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ಕಾವೂರು, ಮುಲ್ಕಿ, ಕಂಕನಾಡಿ, ಉರ್ವ ಠಾಣೆಗಳು ಮತ್ತು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದೆ.
