
ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಂಗಳೂರು: “ಸಹಕಾರಿ ಪಿತಾಮಹ” ದಿ.ಮೊಳಹಳ್ಳಿ ಶಿವರಾವ್ ಸ್ಮರಣಾರ್ಥವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ ಶನಿವಾರ ಮಧ್ಯಾಹ್ನ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, “ವಿದ್ಯಾರ್ಥಿಗಳು ಇನ್ನಷ್ಟು ಬೆಳೆಯಬೇಕು, ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ತುಂಬಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ನವೋದಯ ಗ್ರಾಮ ವಿಕಾಸ ಯೋಜನೆಯಲ್ಲಿ 90 ಶೇಕಡಾ ಮಹಿಳೆಯರಿದ್ದು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇಂದು ಇಲ್ಲಿ ಪುರಸ್ಕಾರ ಪಡೆದಿರುವ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ, ಮಕ್ಕಳು ದೇಶಕಟ್ಟುವ ಕಾಯಕದಲ್ಲಿ ತೊಡಗಲಿ. ಮುಂದೆ ಕನಿಷ್ಠ ಇಬ್ಬರು ಮಕ್ಕಳಿಗಾದರೂ ನೆರವಾದರೆ ನಮ್ಮ ಶ್ರಮ ಸಾರ್ಥಕ“ ಎಂದರು.
2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಣೆಯನ್ನು ನೆರವೇರಿಸಿ ಮಾತಾಡಿದ ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು, “ಪ್ರತಿಭಾ ಪುರಸ್ಕಾರದಿಂದ ಇನ್ನುಳಿದ ಮಕ್ಕಳು ಕೂಡ ಪ್ರೇರೇಪಣೆ ಪಡೆಯುತ್ತಾರೆ. ವಿದ್ಯಾರ್ಥಿಗಳಿಗೆ ಪುರಸ್ಕಾರ, ಸನ್ಮಾನ ಮಾಡುವ ಉದ್ದೇಶ ನೀವು ಬೆಳೆಯುತ್ತ ದೇಶದ ಆಸ್ತಿಯಾಗಬೇಕು. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ತಮ್ಮ ಜನಪರ ಕಾರ್ಯಗಳಿಂದ ಇಂದು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರನ್ನೇ ಮೀರಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾದುದು. ಸಹಕಾರಿ ಕ್ಷೇತ್ರದ ಕಾರ್ಯವೈಖರಿಯನ್ನು ಇಡೀ ರಾಜ್ಯಕ್ಕೆ ತೋರಿಸಿಕೊಡುವ ಮೂಲಕ ಅವರು ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ಶಿಕ್ಷಣ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ಇತರರಿಗೆ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಅವರಿಗೆ ಅಭಿನಂದನೆಗಳು“ ಎಂದರು.

ವೇದಿಕೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ವಿನಯ್ ಕುಮಾರ್ ಸೂರಿಂಜೆ, ಭಾಸ್ಕರ್ ಕೋಟ್ಯಾನ್, ಬ್ಯಾಂಕ್ ಎಂ.ಡಿ. ಗೋಪಿನಾಥ್ ಭಟ್, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಎಂ.ಡಿ.ಪ್ರವೀಣ್ ನಾಯ್ಕ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.

ಯೋಗಾಪ್ರತಿಭೆ ತನುಶ್ರೀ ಪಿತ್ರೋಡಿ ಅವರಿಂದ ಯೋಗ ಪ್ರದರ್ಶನ ನಡೆಯಿತು. ಚಿತ್ರಲೇಖ ಶೆಟ್ಟಿ ದೇವರನ್ನು ಸ್ತುತಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.
